ಭಾರತದ ಮಂದಿರಗಳಲ್ಲಿ ಅನೇಕ ಮಂದಿರಗಳಲ್ಲಿ ಅನೇಕ ವೈವಿದ್ಯಗಳಿವೆ. ಅದರಲ್ಲೂ ಕೆಲವು ಮಂದಿರ ಗಳಲ್ಲಿ ರಹಸ್ಯಗಳು, ವಿಶಿಷ್ಠತೆಗಳು ಅಡಗಿವೆ. ಅಂತಹ ಮಂದಿರಗಳಲ್ಲಿ ಒಂದ ಶೀತಲ ದೇವಿ ಮಂದಿರ. ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿರುವ ಈ ಶೀತಲ ಮಾತಾ ಮಂದಿರದಲ್ಲಿ ಒಂದು ವಿಶೇಷ ಅಥವಾ ವಿಸ್ಮಯವೇ ಇದೆ. ಇಲ್ಲಿ ಆಲಯದಲ್ಲಿ ನೆಲೆಯಾಗಿರುವ ದೇವಿಯ ವಿಗ್ರಹದ ಮುಂದೆ ಒಂದು ನೀರಿನ ಕುಂಡದ ಅರ್ಧಭಾಗ ನೆಲದಲ್ಲಿ ಇದೆ. ಈ ಕುಂಡದೊಳಗೆ ಎಷ್ಟೇ ನೀರು ಸುರಿದರೂ ಅದು ತುಂಬುವುದಿಲ್ಲ ಎಂಬುದೇ ಈ ದೇವಾಲಯದ ವಿಶೇಷ ಹಾಗೂ ಅದ್ಭುತ. ವಿಜ್ಞಾನ ಕೂಡಾ ಈ ಜಲ ಕುಂಡದ ಮುಂದೆ ತಲೆ ಬಾಗಬೇಕು ಎನ್ನುವಂತಿದೆ ಅಲ್ಲಿನ ವಿಸ್ಮಯ.

ಈ ನೀರಿನ ಕುಂಡದ ಮುಚ್ಚಳವನ್ನು ವರ್ಷದಲ್ಲಿ ಎರಡು ಬಾರಿ ಮಾತ್ರ ತೆಗೆಯಲಾಗುತ್ತದೆ. ಒಂದು ಶೀತಲ ಅಷ್ಟಮಿ ಹಾಗೂ ಮತ್ತೊಂದು ಜೇಷ್ಠ ಮಾಸದ ಹುಣ್ಣಿಮೆಯಂದು. ಈ ಎರಡು ದಿನಗಳಲ್ಲಿ ದೇವಿಯ ಮುಂದೆ ಇರುವ ಕುಂಡಕ್ಕೆ ನೀರು ಸುರಿಯಲಾಗುತ್ತದೆ. ಆದರೆ ಭಕ್ತರು ಸಾಲಾಗಿ ಬಿಂದಿಗೆಗಳಲ್ಲಿ ತಂದು ಸುರಿಯುವ ನೀರು ಕೂಡಾ ಆ ಅರ್ಧ ನೆಲದಲ್ಲಿ ಹೂತಿರುವ ಕುಂಡವನ್ನು ತುಂಬಿಸಲು ಸಾಧ್ಯವಾಗುವುದಿಲ್ಲ. ಆದರೆ ಅದಕ್ಕಿಂತ ಅದ್ಭುತ ಏನೆಂದರೆ ಇಷ್ಟೆಲ್ಲಾ ನೀರು ಸುರಿದರೂ ತುಂಬದ ಕುಂಡ ಕಡೆಗೆ ಅರ್ಚಕರು ಹಾಕುವ ಒಂದು ಕೊಡ ಹಾಲಿನಿಂದ ತುಂಬುತ್ತದೆ. ಅದಾದ ನಂತರ ಕುಂಡಕ್ಕೆ ಮುಚ್ಚಳ ಹಾಕಲಾಗುತ್ತದೆ.

ಅಲ್ಲಿನ ಜನರು ಹೇಳುವ ಕಥೆಯ ಪ್ರಕಾರ ಸುಮಾರು 800 ವರ್ಷಗಳ ಹಿಂದೆ ಬಾಬರಾ ಎಂಬ ರಾಕ್ಷಸನು ಇಲ್ಲಿ ಉಪಟಳ ಸೃಷ್ಟಿಸಿದಾಗ, ಭಕ್ತರ ಕೋರಿಕೆಯಿಂದ ಶೀತಲಾ ದೇವಿಯು ಅವನ ಸಂಹಾರ ಮಾಡಿದಳಂತೆ. ಆಗ ಆ ರಾಕ್ಷಸನು ಪ್ರಾಣ ಬಿಡುವ ಮುನ್ನ ತನ್ನ ಕಡೆಯ ಆಸೆಯೆಂದು ,ತನ್ನ ಆತ್ಮ ತೃಪ್ತಿಗಾಗಿ ಪ್ರತಿ ವರ್ಷ ನೀರು ಕುಡಿಸಬೇಕೆಂದು ಬೇಡಿಕೊಂಡನಂತೆ. ಅವನಿಗೆ ಆ ವರ ನೀಡಿದಳು ಶೀತಲ ಮಾತೆ. ಅಂದಿನಿಂದ ವರ್ಷಕ್ಕೆರಡು ಬಾರಿ ಆ ನೀರಿನ ಕುಂಡದೊಳಗೆ ನೀರನ್ನು ಸುರಿಯುವ ಸಂಪ್ರದಾಯ ಬೆಳೆದು ಬಂದಿದೆ ಎನ್ನಲಾಗಿದೆ. ಏನೇ ಆದರೂ ಅಪಾರ ಜಲ ಸುರಿದರೂ ತುಂಬದ ಕುಂಡ ನಿಜಕ್ಕೂ ಅದ್ಭುತ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here