ತಿರುಪತಿ, ಕಲಿಯುಗ ಪ್ರತ್ಯಕ್ಷ ದೈವವೆನಿಸಿದ ಶ್ರೀ ವೆಂಕಟೇಶ್ವರ ಸ್ವಾಮಿಯ ನೆಲೆ ಬೀಡು. ತಿರುಪತಿಯ ತಿರುಮಲದ ಮೇಲೆ ನೆಲೆ‌ ನಿಂತಿರುವ ಬಾಲಾಜಿಯನ್ನು ನೋಡಲು ಭಾರತದ ಮೂಲೆ ಮೂಲೆಗಳಿಂದ ಭಕ್ತರು ಬಂದು , ಆಶೀರ್ವಾದ ಪಡೆದು ಹೋಗುತ್ತಾರೆ. ಹೀಗೆ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಬರುವ ಹಲವು ಭಕ್ತರು , ಕಾಲ್ನಡಿಗೆಯಲ್ಲಿ ಏಳು ಬೆಟ್ಟಗಳನ್ನು ಹತ್ತಿ ಹೋದರೆ ಪುಣ್ಯ ದೊರೆಯುತ್ತದೆ ಎಂಬ ಬಲವಾದ ನಂಬಿಕೆಯನ್ನು ಹೊಂದಿದ್ದಾರೆ. ಆದರೆ ಹಲವರಿಗೆ ಆ ಏಳು ಬೆಟ್ಟಗಳ ಬಗ್ಗೆ, ಅವುಗಳ ಅರ್ಥ, ಹತ್ತುವುದರ ಸಾರ್ಥಕತೆ ಏನೆಂಬುದೇ ತಿಳಿದಿಲ್ಲ.‌ ಹಾಗಾದರೆ ಏಳು ಬೆಟ್ಟಗಳ ಬಗ್ಗೆ ಇಲ್ಲಿದೆ ಮಾಹಿತಿ.

ಆ ಏಳು ಬೆಟ್ಟಗಳು, ವೃಷಭಾದ್ರಿ, ವೃಷಾದ್ರಿ, ಗರುಡಾದ್ರಿ, ಅಂಜನಾದ್ರಿ,ಶೇಷಾದ್ರಿ, ವೆಂಕಟಾದ್ರಿ, ನಾರಾಯಣಾದ್ರಿ. ಈ ಏಳು ಬೆಟ್ಟಗಳು ದೈವಾಂಶ ಸಂಭೂತಗಳು, ಈ ಏಳು ಬೆಟ್ಟಗಳಲ್ಲಿನ ಪ್ರತಿ ಮರ,ಗಿಡ, ಪಕ್ಷಿ, ಪ್ರಾಣಿಗಳೆಲ್ಲವೂ ಋಷಿಗಳ ಅಂಶ. ಇಲ್ಲಿನ ಪ್ರತಿ ಕಣ ಕಣದಲ್ಲಿಯೂ ದೈವಾಂಶ ನೆಲೆ ಮಾಡಿದೆ. ಕಾಲ್ನಡಿಗೆಯಲ್ಲಿ ನಡೆದು ವೆಂಕಟೇಶ್ವರ ಸ್ವಾಮಿಯ ಸನ್ನಿಧಿಗೆ ಹೋಗ ಬಯಸುವವರು ಈ ಬೆಟ್ಟಗಳನ್ನು ಹಾದು ಹೋಗಬೇಕು. ಬನ್ನಿ ಈ ಏಳು ಪವಿತ್ರ ಬೆಟ್ಟಗಳ ಮಹತ್ವ ಏನು ಎಂಬುದನ್ನು ತಿಳಿದುಕೊಳ್ಳೋಣ…

೧. ವೃಷಭಾದ್ರಿ: ಎಂದರೆ ಎತ್ತು. ಅಂದರೆ ಋಗ್ವೇದದ ಪ್ರಕಾರ ಶಿವನ ಕೂರುವ ನಂದಿಗೆ ಸಮಾನ. ವೇದವೆಂಬುದೊಂದು ಪ್ರಮಾಣ. ವೇದದ ಪ್ರಮಾಣವನ್ನು ಅಂಗೀಕರಿಸಿದವನು ಮೊದಲನೇ ಬೆಟ್ಟ ಏರುವನು.

೨. ವೃಷಾದ್ರಿ: ಎಂದರೆ ಧರ್ಮ. ವೇದಗಳನ್ನು ಅನುಸರಿಸಿ ಮಾಡುವ ಕಾರ್ಯಗಳೇ ಧರ್ಮ. ಯಾರು ಧರ್ಮವನ್ನು ಅನುಸರಿಸಿ, ಕಾರ್ಯ ಮಾಡಲು ಸಿದ್ಧನಾಗುವನೋ ಅವನು ವೃಷಾದ್ರಿಯನ್ನು ಏರಿ, ಧರ್ಮದ ಹಾದಿಯಲ್ಲಿ ನಡೆಯುವನು.

೩. ಗರುಡಾದ್ರಿ: ಗರುಡ ಎಂದರೆ ಪಕ್ಷಿ. ಉಪನಿಷತ್ತಿನ‌ ಜ್ಞಾನವನ್ನು ಪಡೆಯುವುದು. ಜಗತ್ತಿನಲ್ಲಿ ಅರ್ಥ ಆಗದಿರುವುದು, ಜಟಿಲವಾದುದು ಭಗವಂತ. ಅಂತಹ ಭಗವಂತನನ್ನು ಜ್ಞಾನದ ಮೂಲಕ ಅರಿಯುವವನು ಏರುವುದೇ ಗರುಡಾದ್ರಿ..

೪. ಅಂಜನಾದ್ರಿ: ಅಂಜನವೆಂದರೆ ಕಣ್ಣಿನ‌ ಕಾಡಿಗೆ. ಈ ಕಣ್ಣಿನಿಂದ ನೋಡುವುದೆಲ್ಲವೂ, ಬ್ರಹ್ಮನ ಸೃಷ್ಟಿ, ಬ್ರಹ್ಮಮಯ ಎಂಬುದನ್ನು ನಂಬಿ ,ಬ್ರಹ್ಮನ ಸೃಷ್ಟಿಗೆ ಕೈ ಮುಗಿದು ಏರುವುದೇ ಅಂಜನಾದ್ರಿ.

೫. ಶೇಷಾದ್ರಿ: ಪ್ರಪಂಚವೆಲ್ಲಾ ಬ್ರಹ್ಮ ಮಯವೆಂದು ನಂಬಿದವನಿಗೆ ರಾಗ ದ್ವೇಷಗಳ ಭಯವಿರುವುದಿಲ್ಲ. ಎಲ್ಲಾ ಸಂದರ್ಭಗಳಲ್ಲಿ ಒಂದೇ ರೀತಿ ಇರುವುದು ಬ್ರಹ್ಮ. ಈ ಬ್ರಹ್ಮ ಜ್ಞಾನ ತಿಳಿದವನು ಏರುವುದು ಶೇಷಾದ್ರಿ.

೬. ವೆಂಕಟಾದ್ರಿ: ವೆಂ ಎಂದರೆ ಪಾಪ, ಕಟಾ ಎಂದರೆ ನಿವಾರಣೆ, ಪಾಪ ನಿವಾರಣೆ ಹೊಂದಿ,ಪಾಪಮುಕ್ತನಾದ ಜ್ಞಾನಿ ಎಲ್ಲರ ಕಣ್ಣಿಗೆ ಹುಚ್ಚನಂತೆ ಕಾಣುವನು. ರಾಮಕೃಷ್ಣ ಪರಮಹಂಸರು ಆ ಹುಚ್ಚು ನನಗೆ ಬರಲೆಂದು ಹೇಳುತ್ತಿದ್ದರಂತೆ. ಅಂತಹ ಸ್ಥಾನ ತಲುಪಲು ಭಕ್ತನು ಏರುವುದು ವೆಂಕಟಾದ್ರಿ.

೭. ನಾರಾಯಣಾದ್ರಿ: ಲೌಕಿಕತೆಯನ್ನು ಮೀರಿ, ಬ್ರಹ್ಮಜ್ಞಾನವನ್ನು ಪಡೆಯುವ ಹಂತಕ್ಕೆ ಏರುವುದು ನಾರಾಯಣಾದ್ರಿ.

ಏಳು ಬೆಟ್ಟಗಳ ಏರುವ ಹಿಂದಿನ ಅರ್ಥ ಹಾಗೂ ಮಹತ್ವ ಇದು. ಇದನ್ನು ಅರಿತು ಪಾದಯಾತ್ರೆಯ ಮೂಲಕ ಏಳು ಬೆಟ್ಟಗಳನ್ನು ಏರಿ ಸಾರ್ಥಕತೆ ಪಡೆಯೋಣ.ಕೆಲವು ಭಕ್ತರು ಇಂದಿಗೂ ಏಳು ಬೆಟ್ಟಗಳನ್ನು ನಡೆದುಕೊಂಡು ಹತ್ತುವುದು ಏಳು ಬೆಟ್ಟಗಳು ಪವಿತ್ರವೆಂದು ತಿಳಿದು.ಈ ಏಳು ಬೆಟ್ಟಗಳನ್ನು ಭಕ್ತಿಯಿಂದ ಹತ್ತಿ ನಡೆದು ತಿರುಮಲ ತಿಮ್ಮಪ್ಪ ಸ್ವಾಮಿಯ ದರ್ಶನ ಪಡೆದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.ಹಾಗಾಗಿ ತಿರುಮಲ ತಿಮ್ಮಪ್ಪ ಸ್ವಾಮಿಯ ದರ್ಶನವನ್ನು ಒಮ್ಮೆಯಾದರೂ ಏಳು ಬೆಟ್ಟಗಳನ್ನು ಕಾಲ್ನಡಿಗೆಯಲ್ಲಿ ಹತ್ತಿ ಪಡೆಯಬೇಕು ಎಂದು ಹೇಳಲಾಗುತ್ತದೆ.

Photos credit :- TTD Facebook Page.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here