ತಿರುಮಲ ತಿರುಪತಿ, ಶ್ರೀ ವೆಂಕಟೇಶ್ವರನ ದಿವ್ಯ ಸಾನಿಧ್ಯ. ಸಕಲ ಶುಭ ಮಂಗಳಗಳ ನೆಲೆ.‌ ಈ ಭೂಲೋಕ ವೈಕುಂಠಕ್ಕೆ ಜನರು ಆಗಾಗ ಬಂದು, ತಮ್ಮ ಹರಕೆಗಳನ್ನು ಮಾಡಿಕೊಳ್ಳುವರು, ಇನ್ನೂ ಹಲವರು ಹರಕೆಗಳನ್ನು ತೀರಿಸಲು , ಕಾಲ್ನಡಿಗೆಯಲ್ಲಿ ಏಳು ಗಿರಿಗಳನ್ನು ಹತ್ತಿ ಹೋಗುವರು‌. ಇಂತಹ ಭಕ್ತರನೇಕರಿಗೆ ತಿರುಮಲದಲ್ಲಿ ವೆಂಕಟೇಶ್ವರ ಸ್ವಾಮಿಯವರ ಸನ್ನಿಧಾನಕ್ಕೆ ಹೋಗಬೇಕಾದ ಸೂಕ್ತ ವಿಧಾನ ಅಥವಾ ಸಂಪ್ರದಾಯದ ಬಗ್ಗೆ ತಿಳಿದೇ ಇಲ್ಲ. ಬಹು ಹಿಂದಿನಿಂದ ನಂಬಿಕೆ, ಹಾಗೂ ಶ್ರೀ ವೆಂಕಟೇಶ್ವರ ಸ್ವಾಮಿಯವರೇ ಹೇಳಿದ್ದಾರೆ ಎಂಬ ನಂಬಿಕೆ ಇದೆ.ಲಕ್ಷ್ಮೀ ದೇವಿಯು ವೈಕುಂಠ ತೊರೆದ ಮೇಲೆ ,ಆಕೆಯನ್ನು ಹುಡುಕುತ್ತಾ ಭೂಮಿಗೆ ಬಂದ ಭಗವಂತ ಶ್ರೀ ವೆಂಕಟೇಶ್ವರನಾಗಿ ತನ್ನ ರಮಾರಮಣಿಯಾದ ಮಾತೆ ಪದ್ಮಾವತಿಯನ್ನು ವಿವಾಹವಾಗಿ ನೆಲೆಸಿದ ಪುಣ್ಯ ಭೂಮಿ, ತಿರುಮಲ ತಿರುಪತಿ. ‌

ಇಂತಹ ಸನ್ನಿಧಾನದಲ್ಲಿ ದೇವ ದೇವನ ದರ್ಶನ ಮಾಡಬೇಕಾದರೆ ಕೆಲವು ವಿಧಾನಗಳನ್ನು ಅನುಸರಿಸಬೇಕು. ನಮ್ಮಲ್ಲಿ ತಿರುಪತಿಗೆ ಹೋಗುವ ಹಲವರು, ನೇರವಾಗಿ ತಿರುಮಲಕ್ಕೆ ಹೋಗಿ ದರ್ಶನ ಮಾಡಿ ವಾಪಸಾಗುತ್ತೇವೆ. ಆದರೆ ಆ ರೀತಿ ಇನ್ನೊಮ್ಮೆ ಹೋಗುವ ಮುನ್ನ ಶ್ರೀ ವೆಂಕಟನಾಥನ ದಿವ್ಯ ಸಾನಿಧ್ಯ ಸೇರುವ ಪಾರಂಪರಿಕ ಮಾರ್ಗದ ಬಗ್ಗೆ ತಿಳಿಯೋಣ.ಶ್ರೀ ವೆಂಕಟೇಶ್ವರ ಮಹಾತ್ಮೆ ಯ ಪ್ರಕಾರ ಶ್ರೀ ನಿವಾಸನ ರೂಪದಲ್ಲಿ ಬಂದ ಸ್ವಾಮಿಗೆ, ನೆಲೆ ನಿಲ್ಲಲು ಸ್ಥಳದ ಅಗತ್ಯವಿತ್ತು. ತಿರುಪತಿಯ ಏಳು ಬೆಟ್ಟಗಳು ಆದಿ ವರಾಹ ಸ್ವಾಮಿಯ ಒಡೆತನದಲ್ಲಿತ್ತು.

ಶ್ರೀ ನಿವಾಸನು ವರಾಹ ಸ್ವಾಮಿಯನ್ನು ತನಗೆ ನೆಲೆನಿಲ್ಲಲು ಸ್ಥಳ ಕೇಳಿದಾಗ , ವರಾಹ ಸ್ವಾಮಿಯು ಪ್ರತಿಯಾಗಿ ತನಗೇನು ದೊರೆಯುವುದೆಂದು ಕೇಳಿದಾಗ, ಶ್ರೀ ವೆಂಕಟೇಶ್ವರ ಸ್ವಾಮಿಯು ತನ್ನನ್ನು ಬೇಡಿ ಬರುವ ಭಕ್ತರು ಮೊದಲಿಗೆ ನಿನ್ನ ಸನ್ನಿಧಾನಕ್ಕೆ ಬಂದು, ದರ್ಶನ ಪಡೆದು ,ಆನಂತರ ನನ್ನ ಸನ್ನಿಧಾನಕ್ಕೆ ಬಂದರೆ ಅವರಿಗೆ ತಿರುಮಲಕ್ಕೆ ಬಂದ ಫಲ ಸುಲಭವಾಗಿ ದೊರೆಯುವುದು ಹಾಗೂ ನನ್ನ ಆಶೀರ್ವಾದ ಅವರಿಗೆ ದೊರಯುವುದು ಎಂದು ಮಾತು ಕೊಟ್ಟರು. ಅಲ್ಲದೆ ಶ್ರೀ ವೆಂಕಟೇಶ್ವರ ಸ್ವಾಮಿಯು ತನ್ನ ವಿವಾಹದ ನಂತರ ತಾನು ವರಾಹನಿಗೆ ಕೊಟ್ಟ ಮಾತನ್ನು, ಲೋಹದ ಹಾಳೆಯ ಮೇಲೆ ಬರೆಯಿಸಿಕೊಟ್ಟ. ಇಂದಿಗೂ ಆದಿ ವರಾಹ ಸ್ವಾಮಿ ದೇವಾಲಯದಲ್ಲಿ ಆ ಒಪ್ಪಂದದ‌ ಪತ್ರವಿದೆ.

ಆದ್ದರಿಂದಲೇ ನಾವು ಕಾಲ್ನಡಿಗೆಯಲ್ಲಿ ಹೋದಾಗ ಮೊದಲಿಗೆ ವರಾಹ ಸ್ವಾಮಿ ದೇವಾಲಯಕ್ಕೆ ಹೋಗಿ ಅಲ್ಲೇ ಹತ್ತಿರದಲ್ಲಿರುವ ಪುಷ್ಕರಣಿಯಲ್ಲಿ ಪವಿತ್ರ ಸ್ನಾನ ಮಾಡಿ, ನಂತರ ಆದಿ ವರಾಹ ಸ್ವಾಮಿಯವರ ದೇವಾಲಯಕ್ಕೆ ಹೋಗಿ, ಸ್ವಾಮಿ ದರ್ಶನ ಪಡೆಯಬೇಕು. ಅನಂತರ ದೇವರ ದೇವ, ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಿದರೆ, ತಿರುಮಲಕ್ಕೆ ಹೋದ ಫಲ ಅಕ್ಷರಶಃ ನಮ್ಮದಾಗುವುದು. ನಮ್ಮ ಹರಕೆಯ ಫಲ ಬಹುಬೇಗ ನಮ್ಮ ಪಾಲಿಗೆ ಬರುವುದು ಎಂಬ ನಂಬಿಕೆಯೂ ಇದೆ. ಇನ್ನು ಮುಂದೆ ಈ ಸರಿಯಾದ ವಿಧಾನವನ್ನು ಅನುಸರಿಸಿ, ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು, ಸ್ವಾಮಿಯ ಕೃಪಾ ಕಟಾಕ್ಷ ವನ್ನು ಪಡೆಯೋಣ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here