ತಿರುಮಲ ತಿರುಪತಿ ಬೆಟ್ಟಕ್ಕೆ ವೆಂಕಟೇಶ್ವರ‌ನ ದಿವ್ಯ ಸಾನಿಧ್ಯಕ್ಕೆ ಹೋಗುವ ಭಕ್ತಾದಿಗಳು ತಮ್ಮ ತಲೆಗೂದಲನ್ನು ಕಾಣಿಕೆಯಾಗಿ ನೀಡುತ್ತಾರೆ. ಕೇಶ ಮುಂಡನಕ್ಕಾಗಿಯೇ ತಿರುಮಲದಲ್ಲಿ ಪ್ರತ್ಯೇಕ ಸ್ಥಾನಗಳಿವೆ‌. ತಿರಮಲದಲ್ಲಿ ತಲೆಗೂದಲನ್ನು ಬೋಳಿಸುವದರ ಹಿಂದೆ ಒಂದು ಪೌರಾಣಿಕ ಕಥೆಯಿದೆ. ಅದೇ ನೀಲಾ ದೇವಿಯ ಕಥೆ. ನೀಲಾದ್ರಿ ಒಂದು ಬೆಟ್ಟವೂ ಹೌದು‌. ಆ ಬೆಟ್ಟದ ಮೇಲೆ ನೆಲೆಸಿದ ಗಂಧರ್ವ ರಾಜಕುಮಾರಿ ನೀಲಾ ದೇವಿ‌. ಮಹಾ ವಿಷ್ಣು ವೆಂಕಟೇಶ್ವರನ ಅವತಾರದಲ್ಲಿ ಶ್ರೀ ಮಹಾಲಕ್ಷ್ಮಿ ಯನ್ನು ಹುಡುಕುತ್ತಾ ಬಂದಾಗ, ಭೂಮಿಯಲ್ಲಿ ಆತ ನೆಲಸಿದ ಜಾಗದಲ್ಲಿ ಒಂದು ಹುತ್ತವಿತ್ತು. ಅದರ ಮೇಲೆ ಪ್ರತಿ ದಿನ ಹಸುವೊಂದು ಬಂದು ಹಾಲು ನೀಡುತ್ತಿತ್ತು. ತನ್ನ ಹಸುವಿನ ಕೆಚ್ಚಲಿನಲ್ಲಿ ಹಾಲು ಇಲ್ಲದಿರುವುದನ್ನು ಗಮನಿಸಿದ ದನಗಾಹಿಯು ಒಂದು ದಿನ ಅದರ ಮರ್ಮ ತಿಳಿಯಲು ಅದರ ಹಿಂದೆ ಹೋದನು.

ಕಾಡಿನಲ್ಲಿ ಹಸು ಹುತ್ತದ ಮೇಲೆ ಹೋಗಿ ಹಾಲು ನೀಡುವಾಗ, ಸತ್ಯದ ಅರಿವಿಲ್ಲದೆ ಕೋಪಗೊಂಡ ದನಗಾಹಿಯು ಹಸುವಿನ ಮೇಲೆ ಪ್ರಹಾರ ಮಾಡಿದಾಗ ಅದರ ಏಟನ್ನು ಶ್ರೀ ವೆಂಕಟೇಶ್ವರ ಸ್ವಾಮಿಯು ತಾನು ಸ್ವೀಕರಿಸಿ, ಆತನ ಶಿರಭಾಗದಲ್ಲಿ ಗಾಯವಾಗಿ ಹೋಯಿತು. ನೋವಿನಿಂದ ಅಲ್ಲಿಂದ ಹೊರಟ ವೆಂಕಟೇಶ್ವರ ಸ್ವಾಮಿಯು ನೀಲಾದ್ರಿ ಪರ್ವತವನ್ನು ಏರಿ, ಅಲ್ಲಿ ವಿಶ್ರಾಂತಿ ಪಡೆಯಲು ಮಲಗಿ ನಿದ್ರಿಸಿದರು.
ಆಗ ಆ ಬೆಟ್ಟದಲ್ಲಿ ನೆಲೆಸಿದ್ದ ನೀಲಾ ದೇವಿ ಅಲ್ಲಿಗೆ ಬಂದು ಪವಡಿಸಿದ್ದ ಶ್ರೀ ವೆಂಕಟೇಶ್ವರನನ್ನು ನೋಡುತ್ತಾ, ಆತನ ಶಿರಭಾಗದಲ್ಲಿ ಕೂದಲು ಇಲ್ಲದೆ ಗಾಯವಾಗಿರುವುದನ್ನು ಕಂಡಳು.

ದಿವ್ಯ ಮನೋಹರನ ರೂಪಕ್ಕೆ ಈ ಲೋಪ ಏಕೆ? ಎಂದು, ಕೂಡಲೇ ತನ್ನ ಮುಂದಲೆಯ ಕೂದಲನ್ನು ತೆಗೆದು ತನ್ನ ಶಕ್ತಿಯಿಂದ ವೆಂಕಟೇಶ್ವರನಿಗೆ ನೀಡಿ,ಆತನ ಕೇಶವಿಲ್ಲದೆ ಲೋಪವಿದ್ದ ಶಿರಭಾಗವನ್ನು ಅಂದವಾಗಿ ಮಾಡಿದಳು. ನಿದ್ರೆಯಿಂದ ಮೇಲೆದ್ದ ವೆಂಕಟೇಶ್ವರನು ನೀಲಾ ದೇವಿಯು ತನಗಾಗಿ ಮಾಡಿದ ತ್ಯಾಗವನ್ನು ಗಮನಿಸಿದ. ಆಕೆಯ ಶಿರಭಾಗದಲ್ಲಿ ರಕ್ತ ಸ್ರಾವ ಆಗಿರುವುದನ್ನು ನೋಡಿ, ದೇವಿ ಇಂತಹ ತ್ಯಾಗ ಬೇಡ ನಿನ್ನ ಕೇಶವನ್ನು ತೆಗೆದು ಕೋ ಎಂದಾಗ ಆಕೆ ಅದಕ್ಕೆ ಒಪ್ಪಲಿಲ್ಲ. ಅಲ್ಲದೆ ಕಲಿಯುಗದಲ್ಲಿ ವೆಂಕಟೇಶ್ವರನನ್ನು ನೋಡಲು ಬರುವ ಭಕ್ತರು ತಮ್ಮ ಕೇಶವನ್ನು ಕಾಣಿಕೆಯಾಗಿ ನೀಡಲಿ ಎಂದು ಹೇಳಿದಳು.

ಮಾನವನ ಅಂದಕ್ಕೆ,ಕಾಮಾಸಕ್ತಿಗೆ ಹಾಗೂ ಅಹಂಕಾರಕ್ಕೆ, ಪಾಪ ಪುಣ್ಯಗಳಿಗೆ ಕಾರಣವಾಗುವ ಕೂದಲನ್ನು, ಭಕ್ತಿಯಿಂದ ಸಮರ್ಪಿಸುವು ಮೂಲಕ ತಮ್ಮ ಕರ್ಮವನ್ನು ಕಳೆದುಕೊಳ್ಳುವರೆಂದು, ಭಕ್ತರ ತಲೆಗೂದಲ ಕಾಣಿಕೆ ನೀಲಾದೇವಿಗೆ ಸಮರ್ಪಣೆಯಾಗಲೆಂದು ಅಂದು ವೆಂಕಟೇಶ್ವರ ಸ್ವಾಮಿಯು ಆಕೆಗೆ ವರ ನೀಡಿದನು. ಅಂದಿನಿಂದ ಇಂದಿನವರೆಗೂ ಭಕ್ತರು ತಿರುಮಲದಲ್ಲಿ ಕೇಶ ಮುಂಡನ ಮಾಡಿಸಿಕೊಳ್ಳುವುದು ಸಂಪ್ರದಾಯವಾಯಿತು. ತಿರುಮಲದಲ್ಲಿ ಕೇಶವನ್ನು ಕೂದಲು ಎನ್ನುವುದಿಲ್ಲ, ಬದಲಿಗೆ ತೆಲುಗಿನಲ್ಲಿ ತಲನೀಲಾಲು ಎಂದೇ ನೀಲಾ ದೇವಿಯನ್ನು ಸ್ಮರಿಸಲಾಗುತ್ತದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here