ಏಳು ಬೆಟ್ಟಗಳ‌ ಮೇಲೆ‌ ನೆಲೆಸಿರುವ, ಭಕ್ತ ವತ್ಸಲನಾದ ಶ್ರೀ ವೆಂಕಟೇಶ್ವರ ಸ್ವಾಮಿಯ ಮಹಿಮೆಯು ಅಪಾರ, ಅನಂತ, ಅನನ್ಯ ಹಾಗೂ ಅವರ್ಚನೀಯ. ಕಲಿಯುಗ ಪ್ರತ್ಯಕ್ಷ ದೈವವೆಂದೇ ಕರೆಯಲ್ಪಡುವ ಶ್ರೀ ಶ್ರೀನಿವಾಸನು ಜಗತ್ತಿನಾದ್ಯಂತ ನೆಲೆಸಿರುವ ತನ್ನ ಭಕ್ತರ ಕೋರಿಕೆಗಳನ್ನು ನೆರವೇರಿಸುತ್ತಾ, ಸೂಜಿಗಲ್ಲಿನಂತೆ ಅಪರಿಮಿತ ಭಕ್ತ ಸಮೂಹವನ್ನು ತನ್ನೆಡೆಗೆ ಸೆಳೆಯುತ್ತಾ, ಅಸಂಖ್ಯಾತ ಭಕ್ತರ ಪೂಜೆ ಪುನಸ್ಕಾರಗಳನ್ನು ಪಡೆಯುತ್ತಾ , ಭೂಮಿಯ ಮೇಲೆ ವಿರಾಜಮಾನನಾಗಿದ್ದಾನೆ.ಇಂತಹ ದೇವರ ದೇವನ ಪ್ರಸಾದ ಎಂದೊಡನೆ ನಮಗೆ ನೆನಪಾಗುವುದು ಲಡ್ಡು. ತಿರುಪತಿ ಎಂದೊಡನೆ ವೆಂಕಟೇಶ್ವರ ಸ್ವಾಮಿಯವರ ಪ್ರಸಾದವಾದ ಲಡ್ಡು ನಮ್ಮ ಮನಸ್ಸಿಗೆ ಬರುತ್ತದೆ.

ಬಹುಶಃ ಆ ಲಡ್ಡುವಿನ ರುಚಿ ಅಂತಹದ್ದು. ಈ ಲಾಡು ಅಥವಾ ಲಡ್ಡು ಶ್ರೀ ವೆಂಕಟೇಶ್ವರ ಸ್ವಾಮಿಯವರ‌ ನೆಚ್ಚಿನ‌ ನೈವೇದ್ಯವೆಂಬುದು ಕೂಡಾ ಸರ್ವರಿಗೂ ವೇದ್ಯವಾದ ವಿಷಯ. ಆದರೆ ನಮಲ್ಲಿ ಹಲವರಿಗೆ ಆ ದೇವ ದೇವನಿಗೆ ಲಾಡು ನೈವೇದ್ಯವಲ್ಲದೆ , ಇನ್ನೂ ಹಲವು ಭಕ್ಷ್ಯ, ಭೋಜಗಳನ್ನು ಸಹಾ ನೈವೇದ್ಯವಾಗಿ ಸಮರ್ಪಿಸುತ್ತಾರೆಂಬುದು ತಿಳಿದಿಲ್ಲ.‌ ಅದಕ್ಕೆ ಇಂದು ನಾವು ನಿಮಗೆ ಶ್ರೀ ವೆಂಕಟೇಶ್ವರ ಸ್ವಾಮಿಯವರಿಗೆ ಸಮರ್ಪಿಸುವ ನೈವೇದ್ಯಗಳು ಯಾವುವೆಂಬುದನ್ನು ತಿಳಿಸುತ್ತೇವೆ.

ಆಧುನಿಕವಾಗಿ ಗ್ಯಾಸ್ ಸ್ಟವ್ ಇತರೆ ಕೃತಕ ಅಡುಗೆ ತಯಾರಿಯ ಪರಿಕರಗಳು ಅನೇಕ ಇದ್ದರೂ, ತಿರುಮಲದಲ್ಲಿ ಸ್ವಾಮಿಯವರಿಗೆ , ಸಂಪ್ರದಾಯಬದ್ಧವಾಗಿ, ಕಟ್ಟಿಗೆಯ ಒಲೆಯ ಮೇಲೆಯೇ ನೈವೇದ್ಯಗಳನ್ನು ತಯಾರಿಸಲಾಗುತ್ತದೆ.
ಸುಪ್ರಭಾತ ಸೇವೆ, ಅರ್ಚನೆ ಸೇವೆ, ತೋಮಾಲೆ ಸೇವೆಗಳ ನಂತರ , ಮೊದಲು ನೈವೇದ್ಯವನ್ನು ಹೊರಗಿನ ವರಾಹ ಸ್ವಾಮಿ ಮಂದಿರದಲ್ಲಿ ಸಮರ್ಪಿಸಿ, ಅನಂತರ ಗರ್ಭಗುಡಿಯಲ್ಲಿರುವ ಮೂಲ ವಿರಾಟ್‌ ಶ್ರೀ ವೆಂಕಟೇಶ್ವರ ಸ್ವಾಮಿಯವರಿಗೆ ಸಮರ್ಪಿಸಲಾಗುವುದು. ಹಿಂದೆ ಈ ಪ್ರಸಾದ ತಯಾರಿಯನ್ನು ಶ್ರೀ ವೆಂಕಟೇಶ್ವರ ಸ್ವಾಮಿಯ ತಾಯಿ ವಕುಳಾ ದೇವಿ ಪರಿವೀಕ್ಷಣೆ ಮಾಡುತ್ತಿದ್ದಳೆಂದು ಹೇಳಲಾಗುತ್ತದೆ.

ಸ್ವಾಮಿಯವರಿಗೆ ಇರಿಸುವ ನೈವೇದ್ಯಗಳು, ಬೆಣ್ಣೆ, ಹಾಲು, ಸಕ್ಕರೆ, ಬೆಲ್ಲ ಮಿಶ್ರಣ ಮಾಡಿ ತಯಾರಿಸಿದ ಎಳ್ಳುಂಡೆ, ಸಿಹಿ ಪೊಂಗಲ್‌ ಅಥವಾ ತೆಲುಗಿನಲ್ಲಿ ಹೇಳುವ ಚಕ್ಕರ ಪೊಂಗಲಿ, ಅಪ್ಪಮ್, ಶುಧ್ಧನಾ ಎಂಬ‌ ಖಾದ್ಯ , ಸಿರಾ, ಪಾಯಸ , ಕ್ಷೀರಾನ್ನ, ಕೇಸರಿಬಾತ್, ಸಕ್ಕರೆ, ಗಸಗಸೆ, ಕಲಕಂಡ, ಒಣದ್ರಾಕ್ಷಿ, ಗೋಡಂಬಿ, ಬಾದಾಮಿ , ಒಣಕೊಬ್ಬರಿ ಮಿಶ್ರಿತ ಪಂಚಕಜ್ಜಾಯ, ತುಪ್ಪದ ದೋಸೆ, ಬೆಲ್ಲದ ದೋಸೆ, ಮೊಲ್ವಾರ, ಹಣ್ಣಿನ ಮಿಶ್ರಣ, ಜಿಲೇಬಿ, ದೊಡ್ಡ ಚಕ್ಕುಲಿಗಳು, ಪೂರ್ಣಂ ಬೂರಲು ಎನ್ನುವ ಸಿಹಿ ಪದಾರ್ಥ, ಕಡಲೇ ಬೀಜದ ಉಂಡೆ, ಪರಮಾನ್ನ, ಬಕಲ ಬಾತ್, ಪಾನಕ,‌ಮನೋಹರಂ, ವಡೆ , ಅವಲಕ್ಕಿ, ಹಾಗೂ ಪುಳಿಯೋಗರೆಯನ್ನು ಸ್ವಾಮಿಯವರಿಗೆ ನೈವೇದ್ಯವನ್ನಾಗಿ ಸಮರ್ಪಿಸಲಾಗುವುದು.

Photos Credit :- TTD Facebook Page

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here