ಆಗಸ್ಟ್ ತಿಂಗಳಲ್ಲಿ ತಿರುಪತಿಗೆ ಭೇಟಿ ನೀಡುವ ಯೋಜನೆಗಳಿರುವ ಭಕ್ತಾದಿಗಳಿಗೆ ಇದೆ, ಇಲ್ಲೊಂದು ವಿಶೇಷ ಸುದ್ದಿ ಅಥವಾ ಮುನ್ಸೂಚನೆ. ಅದೇನೆಂದರೆ ಮುಂಬರುವ ಆಗಸ್ಟ್‌ನ 13,14,15, ಮತ್ತು16 ನೇ ತಾರೀಖುಗಳಲ್ಲಿ ಭಕ್ತರಿಗೆ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಸಾಧ್ಯವಿಲ್ಲ. ಈ‌ ನಾಲ್ಕು ದಿನಗಳಲ್ಲಿ ಆಲಯದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಇರುವ ಕಾರಣ ದೇವಾಲಯದ ಆಡಳಿತ ಮಂಡಳಿಯಾದ ಟಿಟಿಡಿ ಭಕ್ತರಿಗೆ ಈ ದಿನಗಳಲ್ಲಿ ಆಲಯ ಪ್ರವೇಶವನ್ನು ನಿರ್ಬಂಧಿತಗೊಳಿಸುತ್ತಿದೆ.

ಆಗಮ ಶಾಸ್ತ್ರದಲ್ಲಿ ತಿಳಿಸಿರುವ ಸಂಪ್ರದಾಯವಾದ ಅಷ್ಟಬಂಧನ ಬಾಲಾಲಯ ಮಹಾಸಂಪ್ರೋಕ್ಷಣ ಎಂಬ ವಿಧಿಯನ್ನು ದೇವಾಲಯದಲ್ಲಿ ನಿರ್ವಹಿಸಬೇಕಾಗಿದ್ದು, 1958 ರಿಂದ ಶಾಸ್ತ್ರೋಕ್ತವಾಗಿ ನಡೆಸಿಕೊಂಡು ಬರುತ್ತಿರುವ ಈ ವಿಧಿಯು ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ನಡೆಯುತ್ತದೆ.
ಈ ಸಂದರ್ಭದಲ್ಲಿ ತಿರುಪತಿ ಬಾಲಾಜಿ ಹಾಗೂ ಪರಿವಾರ ದೇವತೆಗಳಿಗೆ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತವೆ ಹಾಗೂ ಎಲ್ಲಾ ಉತ್ಸವ ಮೂರ್ತಿಗಳನ್ನು ಯಾಗಶಾಲೆಯಲ್ಲಿಟ್ಟು ಪೂಜಾ ವಿಧಾನಗಳನ್ನು ನಡೆಸಲಾಗುತ್ತದೆ.

ಈ ಸಂದರ್ಭದಲ್ಲಿ ದಿನವೊಂದಕ್ಕೆ ಕೇವಲ 30 ರಿಂದ 35 ಸಾವಿರ ಭಕ್ತಾದಿಗಳಿಗೆ ಮಾತ್ರ ಆಲಯದಲ್ಲಿ ಶ್ರೀ ವೆಂಕಟೇಶ್ವರನ ದರ್ಶನ ಮಾಡಲು ಅವಕಾಶವಾಗುತ್ತದೆ. ಅನೇಕರಿಗೆ ದರ್ಶನ ತುಂಬಾ ತಡವಾಗಿ , ಜನ ಜಂಗುಳಿ ಹೆಚ್ಚುತ್ತದೆ. ಆದರೆ ಈ ಬಾರಿ ಈ ಒತ್ತಡವನ್ನು ತಪ್ಪಿಸಲು ದೇವಾಲಯದ ಆಡಳಿತ ಮಂಡಳಿ ಎಲ್ಲಾ ರೀತಿಯ ದರ್ಶನಗಳನ್ನು ನಾಲ್ಕು ದಿನಗಳ ಕಾಲ ಸಂಪೂರ್ಣವಾಗಿ ನಿಲ್ಲಿಸುವ ನಿರ್ಧಾರ ಮಾಡಿದೆ. ಈಗಾಗಲೇ ಆಗಸ್ಟ್ ತಿಂಗಳ ಅರ್ಜಿತ ಸೇವೆಗಳನ್ನು ರದ್ದುಗೊಳಿಸಿದೆ.

ಆಗಸ್ಟ್‌ 12 ರಿಂದ ಆರಂಭವಾಗುವ ಈ ಸೇವೆಗಳು ಆಗಸ್ಟ್‌ 16 ಕ್ಕೆ ಮುಕ್ತಾಯವಾಗುತ್ತದೆ. ಆಗಸ್ಟ್ 11 ರಂದೇ ಅಂಕುರಾರ್ಪಣೆ ನಡೆಯಲಿದ್ದು, 12 ರಿಂದ ಅಷ್ಟಬಂಧನ ಬಾಲಾಲಯ ಮಹಾಸಂಪ್ರೋಕ್ಷಣ ವಿಧಿಯು ಆರಂಭವಾಗುತ್ತದೆ. ಆದ್ದರಿಂದ ಆಗಸ್ಟ 13 ರಿಂದ 16ರ ವರಗೆ ಎಲ್ಲಾ ಭಕ್ತರಿಗೆ ಆಲಯ ಪ್ರವೇಶ ನಿಷೇಧಿಸಲಾಗಿದೆ. ಈ ವಿಧಿಯು ಮುಗಿದ ನಂತರ ಪುನಃ ಎಂದಿನಂತೆ ದೇವಾಲಯವು ಭಕ್ತರಿಗಾಗಿ ಸದಾ ತೆರೆದಿರುತ್ತದೆ ಎಂದು ಟಿಟಿಡಿ ತಿಳಿಸಿದೆ.

Photos Credit :- Facebook TTD page

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here