ಕಲಿಯುಗದ ಪ್ರತ್ಯಕ್ಷ ದೇವರು, ನಂಬಿದವರ ಪಾಲಿನ ಕಲ್ಪತರು ಎಂದೇ ಖ್ಯಾತಿ ಪಡೆದ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ನಂಬಿದವರು ಎಂದೂ ಸೋಲು ಕಾಣುವುದಿಲ್ಲ ಎಂಬ ಮಾತಿದೆ. ಕಡು ಬಡವನಿಂದ ಹಿಡಿದು ಆಗರ್ಭ ಶ್ರೀಮಂತರು ಸಹ ಶ್ರೀ ವೆಂಕಟೇಶ್ವರ ಸ್ವಾಮಿಯ ಮುಂದೆ ತಲೆ ತಗ್ಗಿಸುತ್ತಾರೆ. ಶ್ರೀ ವೆಂಕಟೇಶ್ವರ ಸ್ವಾಮಿಗೆ ಜಗತ್ತಿನಾದ್ಯಂತ ಅಸಂಖ್ಯಾತ ಭಕ್ತ ಸಂಕುಲ ಇದೆ. ಅದಕ್ಕೆ  ನಮ್ಮ ಕರ್ನಾಟಕದ ದೊಡ್ಮನೆ ಕುಟುಂಬದ ಸದಸ್ಯರು ಸಹ ಹೊರತಾಗಿಲ್ಲ. ಡಾ. ರಾಜಕುಮಾರ್ ಅವರ ಕುಟುಂಬಕ್ಕೂ ಶ್ರೀ ವೆಂಕಟೇಶ್ವರ ಸ್ವಾಮಿಗೂ ಬಿಡಿಸಲಾಗದ ನಂಟು ಎನ್ನಬಹುದು.

ಒಮ್ಮೆ ಅಣ್ಣಾವ್ರು ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಸಾಲಿನಲ್ಲಿ ನಿಂತಾಗ ಅಲ್ಲಿದ್ದ ಸಾವಿರಾರು ಭಕ್ತರು ಅಣ್ಣಾವ್ರನ್ನು ಕಂಡು ನಮ್ಮ ಪಾಲಿನ ವೆಂಕಟೇಶ್ವರ ನಮ್ಮ ಜೊತೆಯೇ ನಿಂತಿದ್ದಾರೆ ಎಂದು ಅಣ್ಣಾವ್ರಿಗೆ ವೆಂಕಟೇಶ್ವರನ ಸನ್ನಿದಿಯಲ್ಲಿ ಕೈ ಮುಗಿದಿದ್ದೂ ಉಂಟು. ಆಗಲೇ ಅಣ್ಣಾವ್ರು ಅಭಿಮಾನಿಗಳನ್ನು ದೇವರು ಎಂದು ಸಂಭೋದನೆ ಮಾಡಿದ್ದು ಎಂದು ಹಿಂದೊಮ್ಮೆ ಪಾರ್ವತಮ್ಮ ರಾಜಕುಮಾರ್ ಹೇಳಿದ್ದು ಇದೆ. ಅದಷ್ಟೇ ಅಲ್ಲದೆ ಡಾ.ರಾಜಕುಮಾರ್ ಅವರಿಗೆ ತಿರುಪತಿಯಲ್ಲಿ ಲೈಫ್ ಟೈಮ್ ಮೆಂಬರ್ ಎಂದು ಗೌರವ ನೀಡಲಾಗಿತ್ತು.
ಆಗಾಗ ತಿರುಪತಿಯ ವೆಂಕಟೇಶ್ವರ ಸ್ವಾಮಿಗೆ ರಾಜ್ ಕುಟುಂಬ ಮುಡಿ ಕೊಡುತ್ತ ಭಕ್ತಿ ಅರ್ಪಿಸುತ್ತಾ ಬಂದಿದೆ.

ಇದೀಗ ಗುರುವಾರದಂದು ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅವರು ಪತ್ನಿ ಸಮೇತ ತಿರುಪತಿಯ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ. ಅರೆ ಅದರಲ್ಲೇನು ವಿಶೇಷ ಎಂದು ನಿಮಗೆ ಅನಿಸಬಹುದು. ಆದರೆ ಇದರಲ್ಲಿ ಖಂಡಿತ ವಿಶೇಷ ಇದೆ. ಅದೇನೆಂದರೆ ಶಿವಣ್ಣ ಮತ್ತು ಗೀತಾ ಶಿವರಾಜ್ ಕುಮಾರ್ ಅವರು ದರ್ಶನದ ಜೊತೆ ಗೀತಾ ಶಿವರಾಜ್ ಕುಮಾರ್ ಅವರು ಮುಡಿ ಸಮರ್ಪಣೆ ಮಾಡಿದ್ದಾರೆ. ಸಾಮಾನ್ಯವಾಗಿ ಸೆಲಬ್ರೆಟಿಗಳು ಮುಡಿ ಕೊಡುವುದು ವಿರಳ, ಅದರಲ್ಲೂ ಸ್ಟಾರ್ ನಟರ ಪತ್ನಿಯರು ಸಂಪೂರ್ಣವಾಗಿ ಮುಡಿ ಕೊಡುವುದು ಬಹಳ ಅಪರೂಪದ ವಿಚಾರ.

ಈ ಬಾರಿ ಗೀತಾ ಶಿವರಾಜ್ ಕುಮಾರ್ ಅವರು ಮುಡಿ ಕೊಡಲು ಬಲವಾದ ಕಾರಣವೂ ಇದೆ ಅದೇನೆಂದರೆ ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ಶಿವರಾಜ್ ಕುಮಾರ್ ಅವರಿಗೆ ಬಲಭುಜದ ಶಸ್ತ್ರ ಚಿಕಿತ್ಸೆ ನಡೆದಿತ್ತು ಆಗ ಅಭಿಮಾನಿಗಳ ಸಮೇತ ಶಿವಣ್ಣನಿಗೆ ಯಶಸ್ವಿ ಚಿಕಿತ್ಸೆ ಆಗಲೆಂದು ಕುಟುಂಬದವರು ದೇವರ ಮೊರೆ ಹೋಗಿದ್ದರು. ಹೀಗಾಗಿಯೇ ಗೀತಾ ಶಿವರಾಜ್ ಕುಮಾರ್ ಅವರು ಪತಿಗಾಗಿ ತಮ್ಮ ಕೂದಲು ಕೊಟ್ಟು ಹರಕೆ ತೀರಿಸಿದ್ದಾರೆ . ಇನ್ನು ಪತ್ನಿ ಜೊತೆ ಇರುವ ಫೋಟೋ ಹಾಕಿ ಈ ವರ್ಷದ ಕಷ್ಟಗಳನ್ನು ದೂರ ಮಾಡಿ ನಮ್ಮನ್ನು ರಕ್ಷಿಸಿದ ತಿಮ್ಮಪ್ಪ ಎಂದು ಡಾ.ಶಿವರಾಜ್ ಕುಮಾರ್ ಪೋಸ್ಟ್ ಮಾಡಿದ್ದಾರೆ . ಸಾಮಾಜಿಕ ಜಾಲತಾಣದಲ್ಲಿ ಗೀತಾ ಶಿವರಾಜ್ ಕುಮಾರ್ ಮುಡಿ ಕೊಟ್ಟಿರುವ ಫೋಟೋಗಳು ಸಕತ್ ವೈರಲ್ ಆಗುತ್ತಿದ್ದು ಪತಿಗಾಗಿ ಮುಡಿ ಕೊಟ್ಟ ಪತ್ನಿಗೆ ಅಭಿನಂದನೆಗಳು ಎಂದು ಗೀತಾ ಶಿವರಾಜ್ ಕುಮಾರ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here