ಕರ್ನಾಟಕದಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗ ನೀಡಬೇಕೆಂದು ಶಿಫಾರಸು ಮಾಡುವ ಸರೋಜಿನಿ ಮಹಿಷಿ ವರದಿಯನ್ನು ರಾಜ್ಯದಲ್ಲಿ ಜಾರಿಗೊಳಿಸಲು ರಾಜ್ಯ ಸರ್ಕಾರವು ವಿಳಂಭ ಮಾಡುತ್ತಿದೆಯೆಂಬ ಕಾರಣಕ್ಕೆ ರಾಜ್ಯದಲ್ಲಿ ಇದರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿ, ಅದರ ವಿರುದ್ಧ ದನಿ ಎತ್ತಿರುವ ಕರ್ನಾಟಕ ರಾಜ್ಯದ ವಿವಿಧ ಕನ್ನಡಪರ ಸಂಘಟನೆಗಳೆಲ್ಲಾ ಒಂದಾಗಿ, ನಾಳೆ ಅಂದರೆ ಫೆಬ್ರವರಿವ 13 ರಂದು ಕರ್ನಾಟಕ ಬಂದ್ ‍ಗೆ ಕರೆಯನ್ನು ನೀಡಿವೆ. ಅಲ್ಲದೆ ಕನ್ನಡ ಪರ ಸಂಘಟನೆಗಳು ಈ ಬಂದ್ ಗೆ ನಾಡಿನ ಪ್ರತಿಯೊಬ್ಬ ಕನ್ನಡಿಗರು ಕೂಡಾ ಸ್ವಯಂಪ್ರೇರಿತರಾಗಿ ಬೆಂಬಲ ನೀಡಬೇಕೆಂಬ ಮನವಿಯನ್ನು ಕೂಡಾ ಮಾಡಿವೆ.

ಈ ಕರ್ನಾಟಕ ಬಂದ್ ಗೆ ಕನ್ನಡ ಚಳುವಳಿಯ ನಾಗೇಶ್ ಅವರ ನೇತೃತ್ವದಲ್ಲಿ ರಾಜ್ಯದ ಒಟ್ಟು 500 ಕ್ಕೂ ಹೆಚ್ಚು ಸಂಘಟನೆಗಳು ತಮ್ಮ ಬೆಂಬಲವನ್ನು ಸೂಚಿಸಿವೆ ಎನ್ನಲಾಗಿದೆ. ಅದರಲ್ಲಿ ಬಹಳ ಪ್ರಮುಖವಾಗಿ ಜಯ ಕರ್ನಾಟಕ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಲಾರಿ ಮಾಲೀಕರ ಸಂಘ, ಸಿಐಟಿಯು ಮೊದಲಾದ ಸಂಘಟನೆಗಳು ತಮ್ಮ ಬೆಂಬಲವನ್ನು ನೀಡಿದೆ. ಈ ಬಂದ್ ಗೆ ಕರೆ ನೀಡಲು ಬಹು ಮುಖ್ಯ ಕಾರಣ ಸರೋಜಿನಿ ಮಹಿಷಿ ಅವರ ವರದಿಯ ವಿಚಾರದಲ್ಲಿ ರಾಜ್ಯ ಸರ್ಕಾರವು ತೋರುತ್ತಿರುವ ನಿರ್ಲಕ್ಷ್ಯ ಧೋರಣೆ ಎನ್ನಲಾಗಿದೆ. ಆ ವರದಿಯಲ್ಲಿ ಶಿಫಾರಸ್ಸುಗಳು ಆದಷ್ಟು ಬೇಗ ಅನುಷ್ಠಾನ ಆಗಬೇಕೆಂಬುದು ಕನ್ನಡ ಪರ ಸಂಘಟನೆಗಳು ಬೇಡಿಕೆಯನ್ನು ಇಟ್ಟಿವೆ.

ಈ ವಿಚಾರ ದಶಕಗಳ ಹಿಂದಿನದು. ಅಂದು 1983 ರಲ್ಲಿ ರಾಮಕೃಷ್ಣ ಹೆಗ್ಗಡೆ ಅವರ ನೇತೃತ್ವದ ಸರ್ಕಾರವು ಕರ್ನಾಟಕದಲ್ಲಿ ಅಸ್ತಿತ್ವದಲ್ಲಿ ಇದ್ದಂತಹ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕನ್ನಡಿಗರಿಗೆ ಎಷ್ಟು ಪ್ರಾಶಸ್ತ್ಯ ಸಿಗಬೇಕೆಂದು ತಿಳಿಸಲು, ಸಚಿವೆ ಸರೋಜಿನಿ ಮಹಿಷಿ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿತ್ತು. ಆ ಸಮಿತಿ 1986 ರ ವೇಳೆಗೆ ತನ್ನ ಅಂತಿಮ ವರದಿಯನ್ನು ಸಲ್ಲಿಸಿತ್ತು. ಆ ಸಮಿತಿ 58 ಶಿಫಾರಸುಗಳನ್ನು ಮಾಡಿತ್ತು. ಅದರಲ್ಲಿ ಈವರೆಗೆ 40 ಶಿಫಾರಸುಗಳನ್ನು ಮಾತ್ರ ರಾಜ್ಯ ಸರ್ಕಾರಗಳು ಒಪ್ಪಿಕೊಂಡಿದ್ದು, ಉಳಿದ ಶಿಫಾರಸ್ಸುಗಳು ಗಗನ ಕುಸುಮವಾಗಿ ಉಳಿದು ಹೋಗಿವೆ.

ಆದ್ದರಿಂದಲೇ ದಶಕಗಳಿಂದಲೂ ಕನ್ನಡ ಪರ ಸಂಘಟನೆಗಳು ಸರೋಜಿನಿ ಮಹಿಷಿ ವರದಿಯ ಎಲ್ಲಾ ಶಿಫಾರಸುಗಳನ್ನು ಜಾರಿ ಮಾಡಲು ಹೋರಾಟ ನಡೆಸಿಕೊಂಡು ಬರುತ್ತಿವೆಯಾದರೂ ಯಾವುದೇ ಬೆಳವಣಿಗೆಯಾಗಲೀ, ಶಿಫಾರಸ್ಸುಗಳ ಅನುಷ್ಠಾನದ ಬಗ್ಗೆ ಯಾವುದೇ ನಿರ್ಧಾರವನ್ನಾಗಲೀ ಸರ್ಕಾರ ಮಾಡದ ಹಿನ್ನೆಲೆಯಲ್ಲಿ ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ.ಇನ್ನು ನಾಳೆ ಎಂದಿನಂತೆ ಶಾಲೆ ಕಾಲೇಜು ಚಿತ್ರಮಂದಿರ ಹೋಟೆಲ್ ಉದ್ಯಮ ತೆರೆದಿರುತ್ತದೆ ಎಂದು ಆಯಾ ಸಂಸ್ಥೆಗಳ ಮುಖ್ಯಸ್ಥರು ತಿಳಿಸಿದ್ದಾರೆ. ಉಳಿದಂತೆ ಓಲಾ, ಉಬರ್, ಮತ್ತು ಕೆಲವು ಆಟೋ ಸಂಘಟನೆ ಬಂದ್ ಗೆ ಬೆಂಬಲ ನೀಡಿರುವುದರಿಂದ ನಾಳೆ ಟ್ಯಾಕ್ಸಿ ಮತ್ತು ಆಟೋಗಳು ರಸ್ತೆಗೆ ಇಳಿಯುವುದಿಲ್ಲ. KSRTC ಮತ್ತು BMTC ಬಸ್ ಗಳು ನಾಳಿನ ಪರಿಸ್ಥಿತಿ ಅರಿತು ನಿರ್ಧಾರ ಕೈಗೊಳ್ಳಲಿವೆ. ಹೀಗಾಗಿ ನಾಳೆ ದೂರದ ಪ್ರಯಾಣ ಮುಂದೂಡುವುದು ಸೂಕ್ತ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here