
ಹಂಪಿಯ ವಿರುಪಾಪುರ ನಡುಗಡ್ಡೆಯಲ್ಲಿ ಸಿಲುಕಿದ್ದವರನ್ನು ರಕ್ಷಿಸಲು ಎನ್ಡಿಆರ್ಎಫ್ ಬೋಟ್ನಲ್ಲಿ ತೆರಳಿದ್ದ ಒಟ್ಟು ಐವರು ರಕ್ಷಣಾ ಸಿಬ್ಬಂದಿ ನೀರುಪಾಲಾಗಿದ್ದರು. ಅವರಲ್ಲಿ ಓರ್ವ ಕಮಾಂಡರ್ ಈಜಿ ದಡ ಸೇರಿದ್ದರೆ, ಉಳಿದವರನ್ನು ಎನ್ಡಿಆರ್ಎಫ್ ತಂಡ ಸೇನಾ ಹೆಲಿಕಾಪ್ಟರ್ ಮೂಲಕ ರಕ್ಷಿಸಿದೆ. ಹೀಗೆ ಪ್ರವಾಹಕ್ಕೆ ಅಂಜದೆ ಈಜಿ ದಡ ಸೇರಿದವರು ಕನ್ನಡದ ಯೋಧ ಚೇತನ್ಕುಮಾರ್ ಎನ್ನಲಾಗಿದ್ದು ಅವರ ಸಾಹಸಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.ಚೇತನ್ಕುಮಾರ್ ಕರ್ನಾಟಕದ ಸಿವಿಲ್ ಡಿಫೆನ್ಸ್ನ ಕಮಾಂಡರ್ ಆಗಿದ್ದಾರೆ. ನಡುಗಡ್ಡೆಯಲ್ಲಿ ಸಿಲುಕಿದ್ದವರ ರಕ್ಷಣೆಗೆ ತೆರಳಿದ್ದರು. ತುಂಗಭದ್ರಾ ನದಿಯ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದರೂ ಎದೆಗುಂದದೆ ಸುಮಾರು 12 ಕಿ.ಮೀ. ದೂರ ಈಜಿಕೊಂಡು ಹೋಗಿ ದಡ ಸೇರಿದ್ದಾರೆ.
ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಆದೇಶದಂತೆ ವಿರುಪಾಪುರಗಡ್ಡಿಯಲ್ಲಿ ಸಿಲುಕಿದ್ದ ವಿದೇಶಿ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 350 ಜನರನ್ನು ಕಾಪಾಡಿ ಸುರಕ್ಷಿತ ಸ್ಥಳಗಳಿಗೆ ರವಾನಿಸಲು ಎನ್ಡಿಆರ್ಎಫ್ ಕಮಾಂಡರ್ಗಳು ಮುಂದಾಗಿದ್ದರು.ಆದರೆ, ಎನ್ಡಿಆರ್ಎಫ್ ತಂಡ ಈ ವೇಳೆ ಸ್ಥಳೀಯರನ್ನು ಕರೆತರಲು ಹೋದಾಗ ನೀರಿನ ರಭಸಕ್ಕೆ ಅವರ ಬೋಟ್ ಮರವೊಂದಕ್ಕೆ ಬಡಿದು ಮಗುಚಿಹೋಗಿದೆ. ಪರಿಣಾಮ ಅದರಲ್ಲಿದ್ದ ಚೇತನ್, ಗೌತಮ್, ನಾಗರಾಜ ಹಾಗೂ ಅಗ್ನಿಶಾಮಕ ದಳದ ಸೂಗನಗೌಡ ಸೇರಿದಂತೆ 5 ಜನ ಕಮಾಂಡರ್ಗಳು ನೀರುಪಾಲಾಗಿದ್ದರು.
ನೀರು ಪಾಲಾದ ಕಮಾಂಡರ್ಗಳನ್ನು ರಕ್ಷಿಸಲು ಹೆಲಿಕಾಪ್ಟರ್ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು. ಈ ನಡುವೆ ಕಮಾಂಡರ್ ಚೇತನ್ ಪ್ರವಾಹದ ನಡುವೆಯೂ ಸುಮಾರು 12 ಕಿ.ಮೀ ಈಜಿ ದಡ ಸೇರಿದ್ದಾರೆ. ನಡುಗಡ್ಡೆಯಲ್ಲಿ ಗಿಡವೊಂದರ ಆಶ್ರಯದಲ್ಲಿ ನಿಂತಿದ್ದ ಇವರನ್ನ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ. ಇವರ ಸಾಹಸ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.ಅಲ್ಲದೆ ಉಳಿದ ನಾಲ್ವರನ್ನೂ ಸಹ ಹೆಲಿಕಾಪ್ಟರ್ ಸಹಾಯದಿಂದ ರಕ್ಷಿಸಲಾಗಿದ್ದು, ಜೀವದ ಹಂಗು ತೊರೆದು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಎನ್ ಡಿಆರ್ ಎಫ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಶ್ಲಾಘಿಸಿದ್ದಾರೆ. ಅಲ್ಲದೆ, ಸುರಕ್ಷಿತವಾಗಿ ವಾಪಸ್ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.