ಜೀವನ ನಡೆಸುವ ಹುಮ್ಮಸ್ಸು, ಆತ್ಮ ಸ್ಥೈರ್ಯ ಹಾಗೂ ಪ್ರೋತ್ಸಾಹ ನೀಡುವ ಜನರು ಸುತ್ತಲು ಇದ್ದರೆ ಆತ್ಮವಿಶ್ವಾಸದಿಂದ ಮುನ್ನಡೆಯಿಡಲು ಜೀವನದ ಯಾವುದೇ ಕಷ್ಟವಾಗಲೀ, ಸಮಸ್ಯೆಯಾಗಲೀ ದೂರ ಓಡಲೇಬೇಕು ಎಂಬುದನ್ನು ಅಕ್ಷರಶಃ ಸಾಬೀತು ಮಾಡಿ ತೋರಿಸಿದ್ದಾನೆ ಒಬ್ಬ ಬಾಲಕ. ಈ ಬಾಲಕನ ಹೆಸರು ಅಬು ಹಮ್ಜಾ. ಈತನ ಜೀವನವನ್ನು ನೋಡಿದ ಮೇಲೆ ನಿಜಕ್ಕೂ ಜೀವನ ನಡೆಸುವುದು ಕಷ್ಟ ಎಂದು ಭಾವಿಸುವವರಿಗೂ ಕೂಡಾ,‌ ಸಮಸ್ಯೆಗಳನ್ನು ಎದುರಿಸಿ ಮುನ್ನಡೆಯಬೇಕು ಎಂಬ ಹುಮ್ಮಸ್ಸು ಮೂಡುವುದರಲ್ಲಿ ಯಾವುದೇ ಅನುಮಾನವಿಲ್ಲ.

2014 ರಲ್ಲಿ ಇಟಾವಾದ ಅಬು ಹಮ್ಜಾ ಏಳು ವರ್ಷದ ಬಾಲಕನಾಗಿರುವಾಗ ಮನೆಯ ಬಾಲ್ಕನಿ ಮೇಲೆ ಹಾದು ಹೋಗಿದ್ದ ಹೈಟೆನ್ಷನ್ ವಿದ್ಯುತ್ ತಂತಿಗಳು ತಾಕಿ ಜರ್ಜರಿತನಾದ. ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ದುರಾದೃಷ್ಟವಶಾತ್ ಆತನ ಎರಡೂ ಕೈಗಳನ್ನು ಕತ್ತರಿಸಬೇಕಾಯಿತು. ತಂದೆ ಲಾಯ್ಕುದ್ದೀನ್ ತಾಯಿ ಪರ್ವೀನಾ ಬೇಗಂ ಮಗನ ಪ್ರಾಣ ಉಳಿದಿದ್ದಕ್ಕೆ ಆ ದೇವರಿಗೆ ಧನ್ಯವಾದ ಹೇಳಿದರು. ಆದರೆ ಮಗನ ಪರಿಸ್ಥಿತಿ ಅವರಿಗೆ ಕೆಲ ಕಾಲ ನೋವು ಉಂಟುಮಾಡಿತು. ಇಷ್ಟು ವರ್ಷ ಸಾಮಾನ್ಯವಾಗಿದ್ದ ಬಾಲಕ ದಿವ್ಯಾಂಗನಾದ. ಆದರೆ ಅದು ಅವನಿಗೆ, ಅವನ ಜೀವನಕ್ಕೆ ಅಡ್ಡಿಯಾಗಲೇ ಇಲ್ಲ.

ದುರ್ಘಟನೆಯ ಕೆಲವೇ ತಿಂಗಳ ನಂತರ ಅಬು ಹಮ್ಜಾ ಶಾಲೆಗೆ ಹೋಗಲು ಆರಂಭಿಸಿದ. ಕಾಲಿನಲ್ಲಿ ಬರೆಯುವುದು ಅಭ್ಯಾಸ ಮಾಡಿಕೊಂಡ. ಕಾಲಿನಲ್ಲೇ ಬರೆದರೂ ಆತ ಸ್ಪಷ್ಟವಾಗಿ ಬರೆಯಲಾರಂಭಿಸಿದ. ಆತನ ಬರವಣಿಗೆ ನೋಡಿ ಅನೇಕರು ಸಂತೋಷ ಪಟ್ಟರು. ಇಟಾವಾದ ರಾಯಲ್ ಆಕ್ಸ್‌ಫರ್ಡ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿ ಆಗಿರುವ ಅಬು 2015 ರಲ್ಲಿ ಸಹೋದರನ ಸಹಾಯದಿಂದ ತಾನೇ ಒಂದು ಸೈಕಲ್ ಡಿಸೈನ್ ಮಾಡಿಸಿ ಅದನ್ನು ಎದೆಯ ಭಾಗದಿಂದ ಹ್ಯಾಂಡಲ್ ಮಾಡುತ್ತಾ ತುಳಿಯುತ್ತಾನೆ.

2018 ರಲ್ಲಿ ಇಟಾವಾ ಮಹೋತ್ಸವದಲ್ಲಿ ಲೊಕೊಮೋಟಿವ್ ಇಂಜಿನ್ ಪ್ರದರ್ಶನ ಮಾಡಿದ. ಅದು ಸರಿಯಾಗಿ ಕಾರ್ಯ ನಿರ್ವಹಿಸಲಿಲ್ಲ. ಆದರೆ ಧೃತಿಗೆಡದೆ ಅಬು ಹಮ್ಜಾ 2019 ರಲ್ಲಿ ಮತ್ತೆ ಪ್ರಯತ್ನ ಮಾಡಿ ವಿದ್ಯುತ್ ಶಕ್ತಿಯಿಂದ ಅದನ್ನು ನಡೆಸಿ ಎಲ್ಲರಿಂದ ಮೆಚ್ಚುಗೆ ಗಳಿಸಿದ. ಅಬು ಹಮ್ಜಾ ವಯಸ್ಸಿನಲ್ಲಿ ಚಿಕ್ಕವನಿರಬಹುದು. ಆದರೆ ಆತನ ಜೀವನ ಇಂದಿನ ಲಕ್ಷಾಂತರ ಜನರಿಗೆ ಸ್ಪೂರ್ತಿಯಾಗುವ ಕಥೆ. ಅಬು ಹಮ್ಜಾ ನ ಹುಮ್ಮಸ್ಸು ಹಾಗೂ ಮೇಧಾ ಶಕ್ತಿ ಪ್ರತಿಯೊಬ್ಬರಿಗೂ ಪ್ರೇರಣೆಯಾಗಲಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here