ಸುದ್ದಿಮನೆ ಸಿನಿಮಾ ವಿಮರ್ಶೆ.

ಚಿತ್ರ :- ಐ ಲವ್ ಯು

ತಾರಾಗಣ :- ರಿಯಲ್ ಸ್ಟಾರ್ ಉಪೇಂದ್ರ , ರಚಿತಾರಾಮ್, ಸೋನುಗೌಡ , ಹೊನ್ನವಳ್ಳಿ ಕೃಷ್ಣ , ಬ್ರಹ್ಮಾನಂದಂ ಮುಂತಾದವರು…

ನಿರ್ಮಾಣ ಮತ್ತು ನಿರ್ದೇಶನ :- ಆರ್. ಚಂದ್ರು .

ರಿಯಲ್ ಸ್ಟಾರ್ ಉಪೇಂದ್ರ ಅವರು ನಿರ್ದೇಶನ ಮಾಡುವ ಸಿನಿಮಾ ಆಗಿರಲಿ ಅಥವಾ ನಟಿಸುವ ಸಿನಿಮಾ ಆಗಿರಲಿ ಅಲ್ಲೊಂದು ವಿಶೇಷವಂತೂ ಇರಲೇಬೇಕು. ಅದರಲ್ಲೂ ಈ ಬಾರಿ ಉಪೇಂದ್ರ ಅವರು ಪ್ರೇಮ ಕಥೆಗಳಿಂದ ಪ್ರೇಕ್ಷಕರನ್ನು ಸೆಳೆದ , ತಾಜ್ ಮಹಲ್, ಚಾರ್ ಮಿನಾರ್ ನಂತ ಅದ್ಬುತ ಸಿನಿಮಾ ನೀಡಿದ ನಿರ್ದೇಶಕ ಚಂದ್ರು ಅವರ  ನಿರ್ದೇಶನದಲ್ಲಿ ಸಿನಿಮಾ ಮಾಡಿದ್ದಾರೆ. ಈ ಕಾರಣಗಳಿಗಾಗಿ ಐ ಲವ್ ಯೂ ಸಿನಿಮಾ‌ ಎಲ್ಲರ ಗಮನ ಸೆಳೆದಿತ್ತು. ಪ್ರೇಕ್ಷಕರು‌ ನಿರೀಕ್ಷೆಯಿಂದ ಕಾಯುವಂತೆ ಮಾಡಿದ್ದ ಐ ಲವ್ ಯು ಇಂದು ಅದ್ದೂರಿಯಾಗಿ ತೆರೆಗೆ ಬಂದಿದೆ.  ಸಿನಿಮಾದಲ್ಲಿ ಹಲವು ತಿರುವುಗಳೊಂದಿಗೆ ಚಿತ್ರಕಥೆ ಮೂಡಿ ಬಂದಿದ್ದು, ಪ್ರೇಕ್ಷಕರ ಮನ ಗೆಲ್ಲುವ ಎಲ್ಲಾ ಪ್ರಯತ್ನವನ್ನು ಮಾಡುವಲ್ಲಿ ಐ ಲವ್ ಯು ಯಶಸ್ವಿ ಆಗಿದೆ.

ಚಿತ್ರದ ನಾಯಕ ಪ್ರೀತಿಯ ಬಗ್ಗೆ ಒಂದು ವಿಭಿನ್ನವಾದ  ಆಲೋಚನೆ ಉಳ್ಳವನು. ಅವನ ಪ್ರಕಾರ ಪ್ರೇಮವೆಂದರೆ ಅದು ಕಾಮವಷ್ಟೇ. ಆದರೆ ಇಂತಹವನ ಬಗ್ಗೆ ಅಧ್ಯಯನ ಮಾಡಲು ಬರುವ ಹುಡುಗಿ ಅವನ ಮನದಲ್ಲಿ ಸ್ಥಾನ ಪಡೆದು ಬಿಡುತ್ತಾಳೆ. ಆದರೆ ಇಷ್ಟಪಟ್ಟವಳು ತನ್ನ ಜೊತೆ ಇದ್ದಾಳೆಂದು ನಾಯಕ ನೋಡುವ ವೇಳೆಗೆ ಅವಳು ಅವನಿಂದ ಬಹುದೂರ ಹೋಗಿರುತ್ತಾಳೆ. ಪ್ರೀತಿ, ಪ್ರೇಮದ ಬಗ್ಗೆ ಉಡಾಫೆ ನುಡಿದವನೇ, ಪ್ರೇಮಕ್ಕಾಗಿ ಪರಿತಪಿಸುತ್ತಾನೆ. ಪ್ರಿಯತಮೆಯು ತನ್ನ ಬಿಟ್ಟು ಹೋದ ಕಾರಣವೇನೆಂದು ತಿಳಿಯಲು ಒದ್ದಾಡುವನು. ಕಡೆಗೆ ತನ್ನಲ್ಲಿ ಇಲ್ಲದ ಐಶ್ವರ್ಯ, ಅಂತಸ್ತನ್ನು ನೋಡಿ ಅವಳು ದೂರಾದಳೆಂದು, ಅವಳ ಹೆಸರಿನಲ್ಲಿ ಹುಚ್ಚನಾಗುವ ಬದಲು ಜೀವನ ಹೋರಾಟಕ್ಕೆ ಸಿದ್ಧನಾಗುತ್ತಾನೆ.

ಯಾವ ಐಶ್ವರ್ಯ, ಅಂತಸ್ತು ಇಲ್ಲವೋ ಅದನ್ನು ಪಡೆಯಲು ದುಡಿದು, ಅದೆಲ್ಲ ಗಳಿಸಿ ಒಬ್ಬ ಯಶಸ್ವಿ ಉದ್ಯಮಿಯಾಗಿ, ಒಬ್ಬ ಪತಿ ಹಾಗೂ ಮಗುವಿನ ತಂದೆ ಕೂಡಾ ಆದಾಗ, ಅವನ ಜೀವನದಲ್ಲಿ ಬಿರುಗಾಳಿಯಂತೆ ಮತ್ತೆ ಅಂದು ಬಿಟ್ಟು ಹೋದವಳು ಮತ್ತೆ ಬರುತ್ತಾಳೆ.. ಅಲ್ಲಿಗೆ ಕಥೆಯ ರೋಚಕತೆ ದುಪ್ಪಟ್ಟಾಗುತ್ತದೆ. ಕಾರಣ ಅವಳು ವರ್ಷಗಳ ನಂತರ ಅವಳೇಕೆ ಬಂದಳು? ಅವಳು ಇಷ್ಟು ವರ್ಷ ಎಲ್ಲಿದ್ದಳು? ಅವಳ ಜೀವನದಲ್ಲಿ ನಡೆದಿದ್ದೇನು? ಹೀಗೆ ಪ್ರೇಕ್ಷಕರ ಮನಸ್ಸಿನಲ್ಲಿ ನೂರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತಾ ಸಾಗುತ್ತದೆ ಈ ಕಥೆ.

ಐ ಲವ್ ಯೂ ಹೆಸರು ಕೇಳಿದವರು ಇದೊಂದು ಪಕ್ಕಾ ಪ್ರೇಮ ಕಥೆ ಎಂದು ಕೊಂಡರೆ ಅದು ಸಂಪೂರ್ಣವಾಗಿ ಸರಿಯಲ್ಲ. ಏಕೆಂದರೆ ಇದು ಪ್ರೇಮದಿಂದ ಆರಂಭವಾಗುವ ಒಂದು ಸಾಂಸಾರಿಕ ಚಿತ್ರ ಕೂಡಾ ಹೌದು. ಪ್ರೀತಿ ಪ್ರೇಮಗಳಿಂದಾಚೆಗೆ ಒಂದು ಮೌಲ್ಯ ಇದೆ ಎಂಬುದನ್ನು ಈ ಸಿನಿಮಾ ತಿಳಿಸಿದೆ. ಸಿನಿಮಾದ ಕ್ಲೈಮಾಕ್ಸ್ ನಲ್ಲಿ ಕೂಡಾ ಒಂದು ವಿಶೇಷತೆ ಇದೆ. ಸಿನಿಮಾದ ಡೈಲಾಗ್ ಗಳು ವಿಶೇಷವಾಗಿ ಆಕರ್ಷಿಸುತ್ತವೆ. ಪ್ರೀತಿ, ಪ್ರೇಮ ,ಪ್ರಣಯದ ಜೊತೆ ಜೊತೆಗೆ ತಂದೆ ಪ್ರೀತಿ, ಹೆಂಡತಿಯ ವಾತ್ಸಲ್ಯ, ಆರೈಕೆ ಹೀಗೆ ಹಲವು ಭಾವ ಹೂರಣವಾಗಿದೆ ಐ ಲವ್ ಯೂ.

ಬಹಳ ದಿನಗಳ ನಂತರ ಪ್ರೇಮಕಥಾನಕದೊಳಗೊಂದು ಸಾಂಸಾರಿಕ ಚಿತ್ರ ಜನರನ್ನು ರಂಜಿಸಲು ತೆರೆಯ ಮೇಲೆ ಬಂದಿದೆ. ಒಂದೊಳ್ಳೆ ಸಂದೇಶವನ್ನು ಈ ಚಿತ್ರ ಪ್ರೇಕ್ಷಕರಿಗಾಗಿ ತಂದಿದೆ. ಐಲವ್ ಯೂ ಎಂದು ಹೆಸರು ನೋಡಿದಾಗ , ಚಿತ್ರವನ್ನು ವೀಕ್ಷಣೆ ಮಾಡಿದಾಗ ಸಿಗುವ ಸಂತೋಷ ಒಂದು ಹೊಸ ಅನುಭವ ನೀಡುತ್ತದೆ. ರಚಿತಾ ರಾಮ್ ನಾಯಕಿಯಾಗಿ ಚೆಂದವಾದ ಅಭಿನಯ ನೀಡಿದರೆ, ಸೋನು ಗೌಡ ಕೂಡಾ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಗುರು ಕಿರಣ್ ಅವರ ಹಿನ್ನೆಲೆ ಸಂಗೀತ ಮುದ ನೀಡುತ್ತದೆ. ಸುಜ್ಞಾನ್ ಅವರ ಕ್ಯಾಮೆರಾ ವರ್ಕ್, ಕಿರಣ್ ತೋಟಂಬೈಲು ಅವರ ಸಂಗೀತ ಎಲ್ಲವೂ ಕೂಡಾ ಮನದಲ್ಲಿ ಉಳಿಯುತ್ತವೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here