ಕಲಿಯುಗ ಪ್ರತ್ಯಕ್ಷ ದೈವ ಅಂದರೆ ಅದು ಶ್ರೀ ವೆಂಕಟೇಶ್ವರ ಸ್ವಾಮಿ. ಆತನು ನೆಲೆ ನಿಂತಿರುವ ದಿವ್ಯ ಧಾಮವದು ವೈಕುಂಠ. ವೈಕುಂಠ ಏಕಾದಶಿಯ ದಿನ ಶ್ರೀ ವೆಂಕಟೇಶ್ವರ ನ ಆಲಯದಲ್ಲಿ ಆತನ ದರ್ಶನವನ್ನು ಪಡೆಯುವುದು ಎಂದರೆ ಅದು ಬಹಳ ಪುಣ್ಯ ಪ್ರದವೆಂಬುದು ಪ್ರತೀತಿ. ಏಕಾದಶ ಎಂದರೆ 11 ಎಂದರ್ಥ. ಪ್ರತಿ ಮಾಸದಲ್ಲಿ ಕೂಡಾ ಎರಡು ಏಕಾದಶಿಗಳು ಬರುತ್ತವೆ. ಆದರೆ ಪುಷ್ಯ ಮಾಸದಲ್ಲಿ ಶುಕ್ಲಪಕ್ಷದ ಏಕಾದಶಿ ಮಾತ್ರ ಬಹಳ ವಿಶೇಷವಾದುದು ಮತ್ತು ಇದನ್ನೇ ನಾವು ವೈಕುಂಠ ಏಕಾದಶಿ ಎಂದು ಕರೆದು, ಭಕ್ತಿ ಶ್ರದ್ಧೆಯಿಂದ ಈ ದಿನ ಸರ್ವಾಂತರ್ಯಾಮಿ, ಸರ್ವ ಸಿದ್ಧಿ ಪ್ರದಾತನಾದ ಶ್ರೀ ವೆಂಕಟೇಶ್ವರನನ್ನು ದರ್ಶಿಸುತ್ತೇವೆ.

ಈ ವಿಶೇಷ ದಿನ ಅಂದರೆ ವೈಕುಂಠ ಏಕಾದಶಿಯಂದು ವೈಕುಂಠದ ಉತ್ತರ ಬಾಗಿಲ ಮೂಲಕ ಶ್ರೀ ಮನ್ನಾರಾಯಣನು ಮುಕ್ಕೋಟಿ ದೇವತೆಗಳಿಗೆ ತನ್ನ ದರ್ಶನ ನೀಡುತ್ತಾನೆ ಎಂಬುದು ನಂಬಿಕೆ. ಅಲ್ಲದೆ ಇನ್ನೊಂದು ಪ್ರತೀತಿಯ ಪ್ರಕಾರ ವೈಕುಂಠ ಏಕಾದಶಿಯ ದಿನ ವೈಕುಂಠದ (ಸ್ವರ್ಗದ ಅಥವಾ ವಿಷ್ಣುಲೋಕದ) ಬಾಗಿಲು ತೆರೆದಿರುತ್ತದೆ ಎಂದು ಪ್ರತೀತಿ ಇದೆ. ಅಂದು ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಭಾವನೆಯೂ ಕೂಡಾ ಹಲವರಲ್ಲಿ ಇದೆ.

ವೈಕುಂಠ ಏಕಾದಶಿಯ ಈ ಪರ್ವ ದಿನದಂದು ವೆಂಕಟೇಶ್ವರ ನ ಆಲಯಗಳಲ್ಲಿ ನಿರ್ಮಿಸಿರುವ ವೈಕುಂಠ ದ್ವಾರವನ್ನು ಪ್ರವೇಶಿಸಿದರೆ ಸರ್ವಪಾಪಗಳು ಕಳೆದು, ಪಾಪ ಮುಕ್ತರಾಗುವರೆಂದೂ, ಮೋಕ್ಷ ಸಿಗುವುದೆಂಬ ಪ್ರತೀತಿ ಕೂಡಾ ಇದೆ. ಪುರಾಣ ಕಥೆಗಳ ಪ್ರಕಾರ ಇದೇ ದಿನ ಸಾಗರ ಮಂಥನದಲ್ಲಿ ಅಮೃತವು ಹೊರ ಬಂದು, ದೇವತೆಗಳ ಪಾಲಿಗೆ ಅದು ವರವಾಯಿತು ಎನ್ನಲಾಗುತ್ತದೆ. ಅಲ್ಲದೆ ಪುರಾಣದ ಪ್ರಕಾರ ಈ ದಿನ ಉಪವಾಸವಿದ್ದು, ಏಕಾದಶಿ ಪೂಜೆ ಮಾಡಿ , ದೇವರ ದರ್ಶನ ಮಾಡಿದವರಿಗೆ ವೈಕುಂಠ ಪ್ರಾಪ್ತವಾಗುತ್ತದೆ ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here