Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ರೈತರಿಗೆ ರಿಯಾಯತಿ ದರದಲ್ಲಿ ವಿವಿಧ ಬಿತ್ತನೆ ಬೀಜ

 

ದಾವಣಗೆರೆ; ಜಿಲ್ಲೆಯಲ್ಲಿ ಕೃಷಿ ಇಲಾಖೆಯಿಂದ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ನಿಗಧಿಪಡಿಸಿದ ಸಹಕಾರಿ ಸಂಘಗಳ ಮೂಲಕ ರಿಯಾಯತಿ ದರದಲ್ಲಿ ರೈತರಿಗೆ ವಿವಿಧ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಕಳಪೆ, ಬಿಡಿ ಬಿತ್ತನೆ ಬೀಜದ ಹಾವಳಿ ಹೆಚ್ಚಾಗುತ್ತಿದ್ದು, ಬಿಡಿ ಬೀಜಗಳನ್ನು ವಿವಿಧ ಭಾಗಗಳಿಂದ ಸಂಗ್ರಹಿಸಿ ರೈತರಿಗೆ ಮಾರಾಟ ಮಾಡುತ್ತಿರುವುದು ವರದಿಯಾಗಿರುತ್ತದೆ. ರೈತರು ಅಂತಹ ಅನಧಿಕೃತ ಬಿಡಿ ಬಿತ್ತನೆ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಿ ತೊಂದರೆ ಹಾಗೂ ನಷ್ಟ ಅನುಭವಿಸಿದಲ್ಲಿ ಯಾವುದೇ ದಾಖಲೆಗಳು ಇಲ್ಲದಿರುವುದರಿಂದ ಪರಿಹಾರ ಪಡೆಯಲು ಅರ್ಹರಾಗುವುದಿಲ್ಲ.  ಆದ್ದರಿಂದ ರೈತರು ಬಿಡಿ ಬಿತ್ತನೆ ಬೀಜ ಮಾರಾಟ ಜಾಲಕ್ಕೆ ಸಿಲುಕದೇ ಉತ್ತಮ ಗುಣಮಟ್ಟದ ದೃಢೀಕೃತ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಿಂದ ಅಥವಾ ಅಧಿಕೃತ ಕೃಷಿ ಪರಿಕರ ಮಾರಾಟಗಾರರಿಂದ ಖರೀದಿಸಿ ಬಿತ್ತನೆ ಮಾಡಬೇಕು.

ಜಿಲ್ಲೆಯಲ್ಲಿ ಯಾವುದೇ ಅನಧಿಕೃತ ಬಿಡಿ ಬಿತ್ತನೆ ಬೀಜ ದಾಸ್ತಾನು ಹಾಗೂ ಮಾರಾಟ ಮಾಡುವವರು ಕಂಡು ಬಂದಲ್ಲಿ ಸಹಾಯಕ ಕೃಷಿ ನಿರ್ದೇಶಕರು (ಜಾರಿದಳ) ಮೊ.ಸಂ. 8277931106 ಮತ್ತು 8277931207 ಗೆ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಲು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ತಿಳಿಸಿದ್ದಾರೆ.