ಗುಜರಾತಿನ ಬಹುಚರಾಜಿಯಲ್ಲಿ ವಿಜಯದಶಮಿ ದಿನದಂದು ಸಂಜೆ 4 ಗಂಟೆಗೆ ಅಲ್ಲಿನ ಬಹುಚಾರ್ ದೇವಿಯ ಭವ್ಯವಾದ ಪಲ್ಲಕ್ಕಿ ಬೇಚಾರ್ ಗ್ರಾಮದಲ್ಲಿರುವ ಶಮಿ ವೃಕ್ಷವನ್ನು ಪೂಜಿಸಲು ಹೊರಡುತ್ತದೆ. ಈ ಸಮಯದಲ್ಲಿ ದೇವಿಯನ್ನು ಬಹಳ ವಿಶೇಷವಾದ ನವಲಖಾ ಹಾರದಿಂದ ಅಲಂಕರಿಸಲಾಗುತ್ತದೆ. ಈ ಹಾರದ‌ ಮೌಲ್ಯ ಗೊತ್ತಾದಾಗ ಒಂದು ಕ್ಷಣ ಆಶ್ಚರ್ಯವಾಗುವುದು ಖಚಿತ. ಏಕೆಂದರೆ ಈ ಅಪರೂಪದ ಹಾರದ ಮೌಲ್ಯ ಸುಮಾರು 300 ಕೋಟಿ ರೂ. ಗಳು. ಇದನ್ನು ದೇವಿಯ ಕೊರಳಿಗೆ ದಸರಾ ದಿನದಂದು ಮಾತ್ರ ಅಲಂಕಾರ ಮಾಡಲಾಗುತ್ತದೆ. ಈ ಹಾರದ ಬಗ್ಗೆ ಒಂದು ಇತಿಹಾಸ ಕೂಡಾ ಇದೆ.

ವಡೋದರಾದ ರಾಜವಿ ಶ್ರೀಮಂತ್ ಮನಜಿರಾವ್ ಗಾಯಕ್ ವಾಡ್ ಅವರು ಕಾರ್ಡಿ ಪ್ರಾಂತ್ಯದ ಸುಬೇದಾರ್ ಆಗಿದ್ದಾಗ ಗುಣಪಡಿಸಲಾಗದ ಕಾಯಿಲೆ ಹೊಂದಿದ್ದರು ಎಂದು ಹೇಳಲಾಗಿದೆ. ಆಗ ಅವರು ಇಲ್ಲಿನ ದೇವಿಗೆ ಹರಕೆ ಮಾಡಿಕೊಂಡಾಗ, ಅವರ ಕಾಯಿಲೆ ಗುಣವಾಗಿದ್ದು ಮಾತ್ರವೇ ಅಲ್ಲದೆ, ಅವರು ರಾಜನಾದರು. ಆದ್ದರಿಂದ ಅವರು 1839 ರಲ್ಲಿ ದೇವಿಯ ಭವ್ಯವಾದ ದೇವಾಲಯವನ್ನು ನಿರ್ಮಿಸಿದರು ಮತ್ತು ದೇವಿಗೆ ಅಮೂಲ್ಯವಾದ ನವಲಖಾ ಹಾರವನ್ನು ಅರ್ಪಿಸಿದರು. ಕೋಟಿ ಮೌಲ್ಯದ ಈ ಹಾರವನ್ನು ಬಿಗಿ ಭದ್ರತೆಯ ಮಧ್ಯೆ ಇಡಲಾಗಿದೆ, ಇದನ್ನು ಮಾತೆಗೆ ದಸರೆಯ ಸಂದರ್ಭದಲ್ಲಿ ಮಾತ್ರ ಅಲಂಕಾರ ಮಾಡುತ್ತಾರೆ‌.

ಈ ಬಾರಿಯೂ ವಿಜಯದಶಮಿಯಂದು ಹಾರದ ರಕ್ಷಣೆಗೆ ಪೊಲೀಸರ ಬಿಗಿಯಾದ ವ್ಯವಸ್ಥೆ ಇತ್ತು. ಈ ಹಾರವನ್ನು 06 ಬಹು ಮೌಲ್ಯದ ನೀಲಮಣಿಗಳಿಂದ ಮತ್ತು 150 ಕ್ಕೂ ಹೆಚ್ಚು ವಜ್ರಗಳನ್ನು ಬಳಸಿ ಮಾಡಲಾಗಿದೆ. ಈ ಹಾರವು 137 ವರ್ಷದ್ದಾಗಿದ್ದು, ಇದು ಸುಮಾರು 300 ಕೋಟಿ ರೂ ಬೆಲೆಬಾಳುವ ಅಪರೂಪದ ಹಾಗೂ ವಿಶೇಷವಾದ ಹಾರವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here