ಬೆಟ್ಟದಾ ಮೇಲೊಂದು ಮನೆಯ ಮಾಡಿ..
ನಟಿ ಲೀಲಾವತಿ ಈಗೇನು ಮಾಡುತ್ತಿದ್ದಾರೆ?
ಹಿರಿಯ ನಟಿ ಲೀಲಾವತಿಯವರ ಬದುಕು ಮೂರಾಬಟ್ಟೆಯಾಗಿದೆಯೇ? ಖಂಡಿತಾ ಇಲ್ಲ. ಈಕೆ ಜಾಣೆ. ಮಂಗಳೂರಿನ ಈ ಹೆಣ್ಣು ಮಗಳು ಮಾಡಿಟ್ಟಿರುವ ಏಕರೆಗಟ್ಟಲೆ ಜಮೀನೇ ಇದಕ್ಕೆ ಸಾಕ್ಷಿ. ಮದರಾಸಿನಲ್ಲಿ, ಬೆಂಗಳೂರಿನ ನೆಲಮಂಗಲದಲ್ಲಿ, ಸೋಲದೇವನಹಳ್ಳಿಯಲ್ಲಿ, ಮೈಸೂರಿನಲ್ಲಿ…

ಹೀಗೆ ಜಮೀನು ಮತ್ತು ಪಾಶ್ ಬಂಗಲೆಗಳ ಒಡೆತನವಿರುವ ಲೀಲಮ್ಮ ಇವೆಲ್ಲವನ್ನೂ ಮಾಡಿಟ್ಟಿರುವುದು ಒಬ್ಬನೇ ಒಬ್ಬ ಮಗನಿಗಾಗಿ. ಆತನ ಹೆಸರು : ವಿನೋದ ರಾಜ್. ಈ ಅಮ್ಮ ಮಗ ಈಗ ಹೇಗಿದ್ದಾರೆ ಎಂಬ ಕುತೂಹಲದಿಂದ ಅವರ ಜೊತೆ ಮಾತು ಕತೆ ನಡೆಸಿದಾಗ ಸಿಕ್ಕ ವಿವರ ಇಲ್ಲಿದೆ :

‘ತಾಯಿಯಿಂದ ಹಿಡಿದು ನಾಯಿಯ ತನಕದ ಪಾತ್ರಗಳನ್ನು ನಾನು ನಿರ್ವಹಿಸಿದ್ದೇನೆ. ಎಲ್ಲವೂ ಕರುಳ ಕುಡಿಗಾಗಿ. ಈ ವಿನೋದನೊಬ್ಬ ಇಲ್ಲವಾದರೆ ನನ್ನ ಬದುಕು ಹೇಗಿರುತ್ತಿತ್ತೋ ಆ ಪರಮಾತ್ಮನೇ ಬಲ್ಲ…’ – ಎಂದು ಪ್ರಶ್ನಿಸುತ್ತಾ ಆಕಾಶಕ್ಕೆ ಕೈ ತೋರಿಸಿದರು ಲೀಲಮ್ಮ. ಮಗ ವಿನೋದ ರಾಜ್ ಟಿಲ್ಲರ್’ನಲ್ಲಿ ಜಮೀನು ಉಳುತ್ತಿದ್ದ! ತಲೆಗೊಂದು ಮುಂಡಾಸು, ದೊಗಳೆ ಚೆಡ್ಡಿ.

ಮಗನನ್ನೇ ಒಂದು ಕ್ಷಣ ದಿಟ್ಟಿಸಿದ ಲೀಲಮ್ಮ ತಮ್ಮ ಮಾತನ್ನು ಮುಂದುವರಿಸಿದರು : ‘ಮೂರೇ ಮೂರು ಮುಕ್ಕಾಲು ದುಡ್ಡು ಕೈಲಿದ್ದಾಗ ತೆಗೆದು ಹಾಕಿದ ಮದರಾಸಿನ ಜಮೀನಿದೆ, ಬಂಗಲೆಯಿದೆ. ಅದೇ ಮೂರು ಮುಕ್ಕಾಲು ದುಡ್ಡು ಖರ್ಚು ಮಾಡಿ ಖರೀದಿಸಿದ ನೆಲಮಂಗಲದ ಜಮೀನು ಮತ್ತು ಬಂಗಲೆಯಿದೆ. ಮೈಸೂರಿನಲ್ಲಿ ‘ಮೂಡಾ’ ಕೊಟ್ಟ ಒಂದು ಸೈಟ್.

ಮತ್ತೀಗ ಸೋಲದೇವನಹಳ್ಳಿಯ ಈ ಜಮೀನು. ಇವಿಷ್ಟೂ ಮಗನಿಗೆ ಸೇರಿದ್ದು. ಈ ಬೋಳು ಗುಡ್ಡದ ಜಮೀನನ್ನು ನಾನು ಖರೀದಿಸಿದಾಗ ಆತ ಗೋಣಗಿದ್ದ. ಆದರೆ ಎಲ್ಲಾ ಕಾಲವೂ ಒಂದೇ ತೆರನಾಗಿರುವುದಿಲ್ಲ. ನಾನು ಶಾಶ್ವತಾನಾ? ಮಧ್ಯೆ ಗೊಟಕ್ ಅಂದ್ರೆ ಶಾಪ ಹಾಕಬಾರದಲ್ವಾ? ಅಮ್ಮನ ಸೆರಗು ಹಿಡಿದು ಸುತ್ತುತ್ತಾನೆ ಅಂತ ಜನ ಆಡಿಕೊಳ್ತಿದ್ದಾರೆ!

ಆಡಿಕೊಳ್ಳೋರಿಗೆ ಏನು ಮಾಡಕ್ಕಾಗತ್ತೆ ಅಲ್ವಾ? ಒಂದೊಂದು ಸಾರಿ ಅವರು ಹೇಳೋದು ನಂಗೂ ಸರಿ ಅನ್ಸತ್ತೆ. ಎಲ್ಲಾದ್ರೂ ಹೋಗಿ ಬದುಕಿಕೋ ಮಾರಾಯ ಅಂತಿರ್ತೇನೆ.

ಆದ್ರೆ ಎಲ್ಲಿಗೆ ಹೋಗ್ತಾನೆ ಕಂದಾ? ಇವ್ನಿಗೆ ನನ್ನ ಚಿಂತೆ. ನನ್ನ ಆರೋಗ್ಯದ ಚಿಂತೆ. ಸೀರಿಯಲ್ಲೋ, ಸಿನೆಮಾನೋ ಏನಾದ್ರೂ ಮಾಡಬಹುದಿತ್ತು. ಆದ್ರೆ ಈ ನನ್ ಕಂದಾ ನನ್ನನ್ನು ಬಿಟ್ಟು ಹೋಗಲ್ಲ ಅಂತಾನೆ.

ನಿನ್ನ ಮಾಡಿಲೇ ಸ್ವರ್ಗ ಅಂತಾನೆ. ನಾನು ಏನು ಹೇಳಲಿ? ಹೊಟ್ಟೆಗೆ ಬಟ್ಟೆ ಕಟ್ಟಿಕೊಳ್ಳುವುದೆಂದರೇನೆಂದೇ ಗೊತ್ತಿಲ್ಲದ ನಿಷ್ಪಾಪಿ. ಇವನ ಮಟ್ಟಿಗೆ ಇದೊಂದು ಗಾದೆಯ ಮಾತಷ್ಟೇ. ಆದ್ರೆ ನಾನು ಆ ಕಾಲದಲ್ಲಿ ಅಕ್ಷರಶಃ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಂಡೇ ಬೆಳೆದವಳು! ಆತನಿಗೂ ಈ ಪಾಡು ಬಾರದಿರಲಿ ಅಂತ ಈ ಎಲ್ಲಾ ಜಾಗ್ರತೆ, ಮುನ್ನೆಚ್ಚರಿಕೆ…’ – ಇಷ್ಟು ಹೇಳುತ್ತಾ ಲೀಲಾವತಿ ಆರ್ದ್ರರಾದರು. ಅದು ಮಾತು ಮೌನವಾಗುವ ಹೊತ್ತು!!!

ಗಮನಿಸಿ :-ಇದನ್ನು ಖ್ಯಾತ ಲೇಖಕರಾದ ಶ್ರೀ ಗಣೇಶ್ ಕಾಸರಗೋಡು ಅವರು ಬರೆದಿದ್ದಾರೆ. ಈ ಲೇಖನದ ಕೃಪೆ:- ಗಣೇಶ್ ಕಾಸರಗೋಡು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here