ಉತ್ತರ ಕರ್ನಾಟಕ ಸೇರಿದಂತೆ ಕರಾವಳಿ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿಯಿಂದ ಜನ ಜೀವನ ಸಂಕಷ್ಟಕ್ಕೆ ಸಿಲುಕಿ ಅನ್ನ, ನೀರಿಗಾಗಿ ಪರದಾಡುವ ಪರಿಸ್ಥಿತಿ ಇದ್ದು, ಜನರ ಜೀವನವನ್ನು ನೋಡಿ ನಾಡಿಗೇ ನಾಡು ಸಹಾಯ ಮಾಡಲು ಮುಂದಾಗುತ್ತಿದ್ದಾರೆ, ಜನರ ಸಂಕಷ್ಟವನ್ನು ಆಲಿಸಿ ಅವರಿಗೆ ಅಭಯ ನೀಡಬೇಕಾದ ಕೆಲವು ನಾಯಕರು ಹಬ್ಬದ ಸಂಭ್ರಮದಲ್ಲಿ ತೊಡಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿ, ಜನರ ಟೀಕೆಗಳಿಗೆ ಗುರಿಯಾಗಿದೆ. ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಎಲ್ಲಾ ಕಾಂಗ್ರೆಸ್ ಪಕ್ಷದ ನಾಯಕರಿಗೆ ಆಹ್ವಾನ ನೀಡಿ, ಭರ್ಜರಿ ಭೋಜನ ಕೂಟ ನಡೆಸಿದ್ದಾರೆ.

ಉತ್ತರ ಕರ್ನಾಟಕದಲ್ಲಿ ನೆರೆ ಪರಿಸ್ಥಿತಿ ಇದ್ದು, ಜನರ ಸಂಕಷ್ಟಕ್ಕೆ ಮಿಡಿಯಬೇಕಿದ್ದ ಅದೇ ಕ್ಷೇತ್ರದ ನಾಯಕರೇ ಇಂದು ಜಮೀರ್ ಅವರು ಏರ್ಪಡಿಸಿದ್ದ ಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಕೆಜೆ ಜಾರ್ಜ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಎಂಬಿ ಪಾಟೀಲ್, ಮಹದೇವ ಪ್ರಸಾದ್ ಅವರು ಈ ಭೋಜನ ಕೂಟದಲ್ಲಿ ಭಾಗಿಯಾಗಿದ್ದರು.

ನಾಯಕರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಟೀಕೆಗಳು ವ್ಯಕ್ತವಾಗುತ್ತಿವೆ. ಒಂದೆಡೆ ಜನರು ಸಂಕಷ್ಟದಲ್ಲಿರುವಾಗ ನಾಯಕರಾದವರು ಇಂತಹ ಭೋಜನ ಕೂಟದಲ್ಲಿ ಭಾಗವಹಿಸಿರುವುದು ಅಸಮಾಧಾನವನ್ನು ಹುಟ್ಟು ಹಾಕಿದೆ. ನಾಯಕರ ಈ ನಡೆಯ ಬಗ್ಗೆ ಅವರು ಹೇಗೆ ಸಮರ್ಥನೆ ನೀಡುವರು ಎಂಬುದು ಕಾದು ನೋಡಬೇಕಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here