
ರೋಹಿತ್ ಶರ್ಮಾ ಅವರ ದಾಖಲೆಯ 4ನೇ ಶತಕದ (111*) ನೆರವಿನಿಂದ ಭಾರತವು ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ 2ನೇ ಟ್ವೆಂಟಿ-20 ಪಂದ್ಯದಲ್ಲಿ 71 ರನ್ ಅಂತರದ ಭರ್ಜರಿ ಜಯಭೇರಿ ಬಾರಿಸಿದೆ.ಈ ಗೆಲುವಿನ ಜೊತೆ ಭಾರತದ ಡ್ಯಾಷಿಂಗ್ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಅವರು ಸ್ಪೋಟಕ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ದಾಖಲೆಯನ್ನು ಉಡೀಸ್ ಮಾಡಿದ್ದಾರೆ. ಅರೆ ಎಲ್ಲ ಮಾದರಿ ಪಂದ್ಯಗಳಲ್ಲಿಯೂ ರೋಹಿತ್, ವಿರಾಟರನ್ನು ಹಿಂದೆ ಹಾಕಿದರಾ… ಎಂದು ಹುಬ್ಬೇರಿಸಬೇಡಿ. ಬದಲಾಗಿ ಟಿ20 ಮಾದರಿ ಪಂದ್ಯದಲ್ಲಿ ಕೊಹ್ಲಿ ಅವರನ್ನು ಕೊಂಚ ಹಿಂದೆ ತಳ್ಳಿದ್ದಾರೆ ರೋಹಿತ್ ಶರ್ಮಾ.ಮಂಗಳವಾರ ಲಖನೌದಲ್ಲಿನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ
ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಅಜೇಯ 111 ರನ್ ಬಾರಿಸುವ ಮೂಲಕ ರೋಹಿತ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.ಟ್ವೆಂಟಿ ಟ್ವೆಂಟಿ ಕ್ರಿಕೆಟ್ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ರೋಹಿತ್ ಮೊದಲ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. 86 ಪಂದ್ಯಗಳನ್ನು ಆಡಿರುವ ರೋಹಿತ್ ಶರ್ಮಾ ಅವರು 2203 ರನ್ ಗಳಿಸುವ ಮೂಲಕ 62 ಪಂದ್ಯಗಳಲ್ಲಿ 2102 ರನ್ ಗಳಿಸಿದ್ದ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ 71 ಪಂದ್ಯಗಳಿಂದ 2140 ರನ್ ಗಳಿಸಿದ್ದ ನ್ಯೂಜಿಲೆಂಡ್ನ ಬ್ರೆಂಡಮ್ ಮೆಕಲಮ್ ಹಾಗೂ 108 ಪಂದ್ಯಗಳಿಂದ 2190 ರನ್ ಗಳಿಸಿದ್ದ ಪಾಕಿಸ್ತಾನದ ಶೋಹೆಬ್ ಮಲ್ಲಿಕ್ರನ್ನು ಹಿಂದೆ ತಳ್ಳಿರುವ ರೋಹಿತ್ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ಸದ್ಯ ಪಟ್ಟಿಯಲ್ಲಿ ನ್ಯೂಜಿಲೆಂಡ್ನ ಮಾರ್ಟಿನ್ ಗುಪ್ಟಿಲ್ 75 ಪಂದ್ಯಗಳಲ್ಲಿ 2271 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.ಟಿ20 ಪಂದ್ಯದಲ್ಲಿ ನಾಲ್ಕು ಶತಕ ಬಾರಿಸಿದ ಭಾರತದ ಏಕೈಕ ಆಟಗಾರನೆಂಬ ಹೆಗ್ಗಳಿಕೆಯನ್ನು ರೋಹಿತ್ ಹೊಂದಿದ್ದಾರೆ.
ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.