ತಿರುಮಲ ತಿರುಪತಿ ಎಂದರೆ ಅದು ಕಲಿಯುಗ ಪ್ರತ್ಯಕ್ಷ ದೈವವಾದ ಶ್ರೀ ವೆಂಕಟೇಶ್ವರನ ದಿವ್ಯ ಧಾ‌ಮ. ಆತನು ನೆಲೆ ನಿಂತಿರುವ ಪರಮ‌ ಪುಣ್ಯ ಧಾಮ‌. ಏಳು ಬೆಟ್ಟಗಳನ್ನು ಹೊಂದಿರುವ ಈ ಪುಣ್ಯಕ್ಷೇತ್ರದಲ್ಲಿ ಲಕ್ಷಾಂತರ ಜನರು ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಕಾಲ್ನಡಿಗೆಯಲ್ಲಿ, ಪಾದರಕ್ಷೆಗಳನ್ನು ಧರಿಸದೆ ಬೆಟ್ಟಗಳನ್ನು ಹತ್ತಿ ಶ್ರೀ ವೆಂಕಟೇಶ್ವರನ ಸನ್ನಿಧಾನದ ಕಡೆಗೆ ನಡೆಯುತ್ತಾರೆ. ಮನಸ್ಸಿನಲ್ಲಿ ವೆಂಕಟೇಶ್ವರನ ನಾಮ ಸ್ಮರಣೆ ಮಾಡುತ್ತಾ ಹಾದು ಹೋಗುವ ಎಲ್ಲರೂ ಕೂಡಾ ಆ ಏಳು ಬೆಟ್ಟಗಳ ಹೆಸರು ಹಾಗೂ ಅದರ ಹಿಂದಿನ ಕಥೆಯನ್ನು ತಿಳಿದರೆ ತಿರುಪತಿಗೆ ಹೋಗಿ ಬಂದ ಸಾರ್ಥಕತೆ ಮತ್ತಷ್ಟು ಅಧಿಕವಾಗುತ್ತದೆ.

ಏಳು ಗಿರಿಗಳಲ್ಲಿ ಎಲ್ಲದಕ್ಕೂ ಮೊದಲನೆಯದು ವೃಷಭಾದ್ರಿ. ವೃಷಭ ಎಂದರೆ ನಂದಿ , ಶಿವನ ವಾಹನವೂ ಹೌದು‌. ಇನ್ನು ಈ ಬೆಟ್ಟ ಅಥವಾ ಗಿರಿಗೆ ವೃಷಭಾದ್ರಿ ಎಂಬ ಹೆಸರು ಬರಲು ಕಾರಣವಾಗಿರುವ ಪೌರಾಣಿಕ ಕಥೆಯೊಂದಿದೆ. ಕೃತಯುಗದಲ್ಲಿ ತಿರುಮಲದ ತುಂಬರ ತೀರ್ಥದ ಬಳಿ ಒಬ್ಬ ರಾಕ್ಷಸನಿದ್ದ. ಅವನ ಹೆಸರು ವೃಷಭಾಸುರ. ಈ ದೈತ್ಯನು ಶಿವನ ಭಕ್ತ. ಅಸುರನಾಗಿ ಜನ್ಮ ತಾಳಿದ್ದರಿಂದ, ಜನ್ಮದಿಂದಲೇ ಬಂದ ಕೆಲವು ಅಸುರ ಗುಣಗಳು ಅವನಲ್ಲಿ ಇತ್ತು. ಈ ರಾಕ್ಷಸನು ಪ್ರತಿದಿನ ಶಿವಾರಾಧನೆ ಮಾಡಬೇಕಾದರೆ ತನ್ನ ಶಿರವನ್ನು ಕತ್ತರಿಸಿ ಶಿವನಿಗೆ ಸಮರ್ಪಣೆ ಮಾಡುತ್ತಿದ್ದ. ನಂತರ ಅವನ ಶಿರ ಮತ್ತೆ ಯಥಾ ಸ್ಥಾನಕ್ಕೆ ಸೇರುತ್ತಿತ್ತು.

ಒಂದು ದಿನ ಅವರ ಆರಾಧನೆಗೆ ಮೆಚ್ಚಿದ ಶಿವಶಂಕರನು ಅವನ ಮುಂದೆ ಪ್ರತ್ಯಕ್ಷನಾಗಿ ನಿನಗೇನು ವರಬೇಕೆಂದಾಗ, ವೃಷಭಾಸುರನು ಶಿವನೊಡನೆ ಕಾದಾಡಬೇಕೆಂದು ತನ್ನಿಚ್ಚೆಯನ್ನು ತಿಳಿಸಿದ. ಅವನ ಕೋರಿಗೆಗೆ ಮಹಾಶಿವನು ತಥಾಸ್ತು ಎಂದ. ಇಬ್ಬರ ನಡುವೆ ಭೀಕರ ಹೋರಾಟ ನಡೆಯಿತು. ಬಹಳ ದಿನಗಳ ಹೋರಾಟದಲ್ಲಿ ಕೊನೆಗೆ ವೃಷಭಾಸುರನು ಸೋತು, ಪ್ರಾಣ ಬಿಡುವ ಮೊದಲು ಮಹಾಶಿವನನ್ನು ತಾನು ಶಿವನೊಡನೆ ಹೋರಾಡಿ, ಪ್ರಾಣ ಬಿಟ್ಟ ಈ ಸ್ಥಳ ತನ್ನ ಹೆಸರಿಂದಲೇ ಜ‌ನಪ್ರಿಯಬಾಗಬೇಕೆಂದು ಬೇಡಿಕೊಂಡನು. ಶಿವನು ಅವನಿಗೆ ಆ ವರ ನೀಡಿದ. ಅಂದಿನಿಂದ ಆ ಗಿರಿಯ ಹೆಸರು ವೃಷಭಾದ್ರಿ ಆಯಿತು. ಕಾಲ್ನಡಿಗೆಯಲ್ಲಿ ಹೋಗುವವರು ಮೊದಲು ಏರುವ ಗಿರಿಯೇ ಈ ವೃಷಭಾದ್ರಿ.

ತಿರುಪತಿ ತಿರುಮಲದ ಏಳೂ ಬೆಟ್ಟಗಳಿಗೂ ಒಂದೊಂದು ಇತಿಹಾಸ ಇದ್ದು ಉಳಿದ ಆರು ಬೆಟ್ಟಗಳ ಮಾಹಿತಿ ಮುಂದುವರಿಯುತ್ತದೆ…ನಿರೀಕ್ಷಿಸಿ…

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here