ಬೆಂಗಳೂರು: ಗುತ್ತಿಗೆದಾರರ ಬಿಲ್ ವಿಚಾರವಾಗಿ ಬೊಮ್ಮಾಯಿ, ಅಶೋಕ್ ಸೇರಿದಂತೆ ವಿರೋಧ ಪಕ್ಷದ ನಾಯಕರು ಮಾತನಾಡುತ್ತಿದ್ದಾರೆ. ನಿಮ್ಮ ಸರ್ಕಾರ ಇದ್ದಾಗ ಗುತ್ತಿಗೆದಾರರ ಬಿಲ್ ಪಾವತಿ ಮಾಡಲಿಲ್ಲ ಯಾಕೆ?” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.
ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿ, “ಬೊಮ್ಮಾಯಿ ಅವರಿಗಾಗಲಿ, ಅಶೋಕ್ ಅವರಿಗಾಗಲಿ ಅವರ ಸರ್ಕಾರದಲ್ಲಿ ಗುತ್ತಿಗೆದಾರರ ಬಿಲ್ ಪಾವತಿ ಮಾಡಲು ಯಾರು ಅಡ್ಡಿ ಮಾಡಿದ್ದರು? ಅವರ ಬಳಿ ಹಣ ಇರಲಿಲ್ಲವೇ? ಕೆಲಸ ಸರಿ ಇರಲಿಲ್ಲವೇ? ಈ ಪ್ರಶ್ನೆಗೆ ಬಿಜೆಪಿ ನಾಯಕರು ಮೊದಲು ಉತ್ತರ ನೀಡಲಿ. ಉಳಿದಂತೆ ಗುತ್ತಿಗೆದಾರರಿಗೆ ನಾನು ಉತ್ತರ ನೀಡುತ್ತೇನೆ.
ನಮ್ಮ ಸರ್ಕಾರ ಬಂದ ನಂತರ ಮುಖ್ಯಮಂತ್ರಿಗಳು, ಕೆಂಪಣ್ಣ ಅವರ ದೂರಿನ ಆಧಾರದ ಮೇಲೆ ಕೆಲಸ ಆಗಿದೆಯೇ ಇಲ್ಲವೇ ಎಂದು ನೈಜತೆ ಪರಿಶೀಲನೆ ಮಾಡಿ ಎಂದು ತಿಳಿಸಿದರು.
ಇನ್ನು ಬಿಜೆಪಿ ನಾಯಕರು ಕೂಡ ಸದನದಲ್ಲಿ ಗುತ್ತಿಗೆ ಕಾಮಗಾರಿಗಳಲ್ಲಿ ಆಗಿರುವ ಅಕ್ರಮಗಳ ಬಗ್ಗೆ ತನಿಖೆ ಮಾಡಿ ಎಂದು ನಮ್ರತೆಯಿಂದ ಮನವಿ ಮಾಡಿದ್ದರು. ಹೀಗಾಗಿ ನಾವು ತನಿಖಾ ಸಮಿತಿ ರಚನೆ ಮಾಡಿದ್ದೇವೆ. ಕಾಮಗಾರಿಗಳ ಕೆಲಸ ಆಗಿದೆಯೇ ಇಲ್ಲವೇ ಎಂದು ಪರಿಶೀಲನೆ ಮಾಡಲು ಸಮಿತಿಗೆ ಸೂಚಿಸಿದ್ದೇವೆ.
ಮೂರ್ನಾಲ್ಕು ವರ್ಷಗಳಿಂದ ಬಿಲ್ ಪಾವತಿ ಆಗದಿದ್ದಾಗ ಸುಮ್ಮನಿದ್ದವರು, ಈಗ ತನಿಖೆ ಮುಗಿಯುವವರೆಗೂ ಕಾಯಲು ಯಾಕೆ ಸಿದ್ಧರಿಲ್ಲ? ಯಾಕೆ ಈ ಪರಿಯ ಆತುರ? ಏನಿದರ ಹಿಂದಿನ ಮರ್ಮ?
ಇನ್ನು 10-15% ಕಮಿಷನ್ ಕೇಳುತ್ತಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಈ ಕಮಿಷನ್ ಯಾರು ಕೇಳಿದ್ದಾರೆ? ಡಿ.ಕೆ. ಶಿವಕುಮಾರ್ ಕೇಳಿದ್ದಾನಾ? ಸಿದ್ದರಾಮಯ್ಯ ಕೇಳಿದ್ದಾರಾ? ಮಂತ್ರಿಗಳು, ಶಾಸಕರು ಕೇಳಿದ್ದಾರಾ? ಅಧಿಕಾರಿಗಳು ಕೇಳಿದ್ದಾರಾ? ಎಂದು ಹೇಳಲಿ.
ಕಮಿಷನ್ ಕೇಳಿದ್ದರೆ ಇಂದೇ ರಾಜಕೀಯ ನಿವೃತ್ತಿ
ನಾನು ಯಾರ ಬಳಿಯಾದರು ಕಮಿಷನ್ ಕೇಳಿದ್ದರೆ ಇಂದೇ ರಾಜಕಾರಣದಿಂದ ನಿವೃತ್ತಿಯಾಗುತ್ತೇನೆ. ನಾನು ಕೇಳಿಲ್ಲವಾದರೆ ಬೊಮ್ಮಾಯಿ, ಅಶೋಕ್ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತಾರಾ? ನಾನು ಅವರ ಸ್ಥಾನ ಹಾಗೂ ಹಿರಿತನಕ್ಕೆ ಗೌರವ ನೀಡಬೇಕು ನೀಡುತ್ತೇನೆ. ಅಶೋಕ್ ಏನೆಲ್ಲಾ ಮಾತನಾಡಿದ್ದಾರೆ ಎಂಬುದು ಗೊತ್ತಿದೆ. ನನಗೆ ನನ್ನದೇ ಆದ ವ್ಯಕ್ತಿತ್ವ ಇದೆ.
ತನಿಖೆ ಒಂದೆರಡು ಕಡೆ ಮಾತ್ರ ಮಾಡುವುದಿಲ್ಲ. ಎಲ್ಲ ಕಡೆ ಮಾಡಲಾಗುತ್ತದೆ. ಕೆಲಸ ಮಾಡಿದ್ದರೆ ಬಿಲ್ ಪಾವತಿ ಆಗಲಿದೆ. ಈಗ ಒಂದೆರಡು ತಿಂಗಳು ಕಾಯಲು ಆಗುವುದಿಲ್ಲವೇ? ಗುತ್ತಿಗೆದಾರರು ನೇಣು ಹಾಕಿಕೊಳ್ಳುವುದು ಬೇಡ, ದಯಾ ಮರಣ ಕೇಳುವುದೂ ಬೇಡ. ಅವರ ಹಿಂದೆ ಯಾರಿದ್ದಾರೆ ಎಂದು ಗೊತ್ತಿದೆ. ಪ್ರಜಾಪ್ರಭುತ್ವದಲ್ಲಿ ಇಂತಹ ಆರೋಪ ಪ್ರತ್ಯಾರೋಪ ಸಹಜ. ಗುತ್ತಿಗೆದಾರರು ರಾಜ್ಯಪಾಲರು, ಅಶೋಕ್, ಕುಮಾರಸ್ವಾಮಿ ಎಲ್ಲರನ್ನೂ ಕೇಳುತ್ತಿದ್ದಾರೆ. ನಾನು ಅಧಿಕಾರಿಗಳ ಬಳಿ ಮಾಹಿತಿ ಕೇಳಿದ್ದೇನೆ.”
ಕಮಿಷನ್ ವಿಚಾರದಲ್ಲಿ ಶಾಂಗ್ರಿಲಾ ಹೋಟೆಲ್ ನಲ್ಲಿ ಮೀಟಿಂಗ್ ಮಾಡಿದ್ದು, ನಿಮ್ಮ ಪರವಾಗಿ ಅಧಿಕಾರಿಯೊಬ್ಬರು ಬಂದು ಕಮಿಷನ್ ಕೇಳುತ್ತಿದ್ದಾರೆ ಎಂದು ಕೆಂಪಣ್ಣ ಹೇಳಿದ್ದಾರಲ್ಲ ಎಂದು ಗಮನ ಸೆಳೆದಾಗ, “ಕೆಂಪಣ್ಣ ಅವರು ಗೌರವಯುತ ವ್ಯಕ್ತಿ. ನೀವು ಹೇಳಿದಕ್ಕೆ ನಾನು ಅವರ ಬಗ್ಗೆ ಮಾತನಾಡುವುದಿಲ್ಲ. ಅವರ ಹೇಳಿಕೆ ಬಗ್ಗೆ ಗೊತ್ತಿಲ್ಲ. ಅವರಿಗೆ ಯಾವ ಅಧಿಕಾರಿ ಕೇಳಿದ್ದಾರೋ ಆ ಬಗ್ಗೆ ಒಂದು ಅಫಿಡವಿಟ್ ಹಾಗೂ ದೂರು ಸಲ್ಲಿಸಲು ಹೇಳಿ” ಎಂದು ತಿಳಿಸಿದರು.
ದಾರೀಲಿ ಹೋಗೋರಿಗೆಲ್ಲ ಉತ್ತರ ಕೊಡೋಕೆ ಆಗಲ್ಲ
ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ನೀವು ಅಜ್ಜಯ್ಯನ ಮೇಲೆ ಆಣೆ ಪ್ರಮಾಣ ಮಾಡುವಂತೆ ಕೇಳಿರುವ ಬಗ್ಗೆ ಪ್ರಶ್ನಿಸಿದಾಗ, “ರಸ್ತೆಯಲ್ಲಿ ಹೋಗುವ ಯಾರದೋ ಮಾತಿಗೆಲ್ಲ ನಾನು ಉತ್ತರ ನೀಡುವುದಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಮಾತನಾಡಲಿ, ಉತ್ತರ ನೀಡುತ್ತೇನೆ. ಯಾರಿಗೆ ಏನು ಉತ್ತರ ನೀಡಬೇಕೊ ನೀಡುತ್ತೇನೆ” ಎಂದು ತಿಳಿಸಿದರು.
Disclaimer: This Story is auto-aggregated by a Syndicated Feed and has not been Created or Edited By City Big News Staff.