ವಿದೇಶ ಪ್ರವಾಸ ಎಂದರೆ ಮದ್ಯಮ ವರ್ಗದ ಜನರಿಗೆ ಹಾಗೂ ಸಾಮಾನ್ಯರಿಗೆ ಅದೊಂದು ದೊಡ್ಡ ಕನಸಿದ್ದಂತೆ. ಆ ಕನಸು ನನಸು ಮಾಡಿಕೊಳ್ಳಲು ಬಹಳಷ್ಟು ಶ್ರಮವನ್ನೇ ಪಡಬೇಕಾಗುವುದು. ಜೊತೆಗೆ ಕಾನೂನಿನ ನಿಯಮಾವಳಿಗಳನ್ನು ಕೂಡಾ ಪಾಲಿಸಬೇಕು. ಸಾಮಾನ್ಯವಾಗಿ ವಿದೇಶ ಪ್ರವಾಸ ಮಾಡಲು ಬಯಸುವವರ ಬಳಿ ಪಾಸ್ ಪೋರ್ಟ್ ಇರಬೇಕು‌ ಹಾಗೂ ವಿದೇಶ ಪ್ರವಾಸಕ್ಕೆ ವೀಸಾ ಪಡೆಯಬೇಕು. ಅದೆಲ್ಲಾ ಬಹಳ ಸರಳವಾಗಿ ಆಗುವ ಕೆಲಸವಲ್ಲ. ಆದರೆ ಭಾರತೀಯ ಪಾಸ್ ಪೋರ್ಟ್ ಇರುವವರಿಗೆ ಕೆಲವು ದೇಶಗಳಿಗೆ ಹೋಗಲು ವೀಸಾದ ಅಗತ್ಯವಿಲ್ಲ. ಭಾರತೀಯರು ವೀಸಾ ಇಲ್ಲದೆ ಸುಮಾರು 25 ದೇಶಗಳಿಗೆ ಭೇಟಿ ನೀಡಬಹುದು. ಅದರಲ್ಲಿ ಪ್ರಮುಖವಾದ ಏಳು ದೇಶಗಳು ಈ ರೀತಿ ಇವೆ.

೧. ಇಂಡೋನೇಷ್ಯಾ. ಇಲ್ಲಿ ಅನೇಕ ದ್ವೀಪಗಳಿದ್ದು ಇವುಗಳಲ್ಲಿ ಬಾಲಿ ದ್ವೀಪ ಪ್ರವಾಸಿಗರ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. ಇದಲ್ಲದೆ ಗಿಲಿ, ಲೊಂಬೊಕ್ , ಜಕಾರ್ತ ಗಳು ಕೂಡಾ ಬಹಳ ಸುಂದರ ಹಾಗೂ ವಿಶ್ವ ಪ್ರಸಿದ್ದ ಪ್ರವಾಸಿ ತಾಣಗಳಾಗಿದ್ದು, ಇದನ್ನು ನೋಡಲು ಬಯಸಿ ಪ್ರವಾಸ ಹೋಗುವುದಾದರೆ, ಭಾರತೀಯರಿಗೆ 30 ದಿನಗಳ ಪ್ರವಾಸಿ ವೀಸಾ ರಹಿತ ಪ್ರವಾಸಕ್ಕೆ ಅವಕಾಶವನ್ನು ಆ ದೇಶ ಭಾರತೀಯರಿಗೆ ನೀಡಿದೆ.

೨.ಭೂತಾನ್. ಸುತ್ತ ಬೆಟ್ಟಗಳಿಂದ ಕೂಡಿರುವ ಲ್ಯಾಂಡ್ ಲಾಕ್ಡ್ ದೇಶ ಎಂದೇ ಪ್ರಸಿದ್ಧವಾಗಿದೆ. ಜಗತ್ತಿನ ಸಂತೋಷದ ದೇಶ ಎಂದು ಕರೆಯಲ್ಪಡುವ ಈ ದೇಶವು ಕೂಡಾ ಭಾರತೀಯ ಪಾಸ್ ಪೋರ್ಟ್ ಹೊಂದಿರುವವರಿಗೆ ಪ್ರವಾಸಿ ವೀಸಾ ರಹಿತ ಪ್ರವಾಸಕ್ಕೆ ಅವಕಾಶ ಕಲ್ಪಿಸಿದೆ. ಭೂತಾನ್ ನ ಪ್ರಕೃತಿ ಸೌಂದರ್ಯ, ಇಲ್ಲಿನ ಸನ್ಯಾಸಿಗಳ ನಿವಾಸ ತಾಣ, ಪಾರೋದಲ್ಲಿನ ಟೈಗಲ್ ನೆಸ್ಟ್ , ಹಾಗೂ ಕೆಲವು ರುದ್ರ ರಮಣೀಯ ಸೌಂದರ್ಯ ತಾಣಗಳಿಗೂ‌ ಭೂತಾನ್ ಬಹಳ ಪ್ರಸಿದ್ಧವಾಗಿದೆ.

೩. ಮಾಲ್ಡೀವ್ಸ್. ಒಂದು ದ್ವೀಪ ರಾಷ್ಟ್ರ. ಇಲ್ಲಿ ಕೂಡಾ ಭಾರತೀಯ ಪಾಸ್ ಪೋರ್ಟ್ ಇರುವ ಪ್ರವಾಸಿಗರು ವೀಸಾ ರಹಿತವಾಗಿಯೇ ಪ್ರವಾಸ ಮಾಡುವ ತೊಂಬತ್ತು ದಿನ ಉಳಿದುಕೊಳ್ಳುವ ಅವಕಾಶವಿದೆ. ಇಲ್ಲಿನ ಸುಂದರವಾದ ಹವಳದ ದಂಡೆಗಳು ಬಹಳ ಪ್ರಸಿದ್ಧ ಹಾಗೂ ಜಗತ್ತಿನ ಪ್ರಸಿದ್ಧ ಹನಿಮೂನ್ ತಾಣಗಳಲ್ಲಿ ಒಂದಾಗಿದೆ. ‌ಭುವಿಗಿಳಿದ ಸ್ವರ್ಗದಂತ ಪ್ರಕೃತಿ ಸೌಂದರ್ಯವನ್ನು ಸವಿಯಲು ಮಾಲ್ಡೀವ್ಸ್ ಗೆ ಅನೇಕ ಪ್ರವಾಸಿಗರು ಭೇಟಿ ನೀಡುತ್ತಾರೆ.

೪. ಮಾರಿಷಸ್. ಇದು ಕೂಡಾ ಒಂದು ದ್ವೀಪ ರಾಷ್ಟ್ರ. ರಾಮಾಯಣದೊಂದಿಗೆ ಸಂಪರ್ಕವಿರುವ ದ್ವೀಪ. ಮಾರೀಚ ದ್ವೀಪ ಎಂದೇ ಇದನ್ನು ಕರೆಯಲಾಗಿದೆ. ಪ್ರಕೃತಿ ಸೌಂದರ್ಯ, ಬೀಚ್ ಗಳು, ಪರ್ವತಗಳು, ಗಂಗಾ ತಲಾವೋ ಸರೋವರ ಹೀಗೆ ಅನೇಕ ರಮಣೀಯ ತಾಣಗಳನ್ನು ಒಳಗೊಂಡಿರುವ ಈ ದ್ವೀಪ ರಾಷ್ಟ್ರದ ಪ್ರವಾಸ ಮಾಡಲು ಭಾರತೀಯರಿಗೆ ಪಾಸ್ ಪೋರ್ಟ್ ಇದ್ದರೆ ಸಾಕು. ಈ ರಾಷ್ಟ್ರ ಕೂಡಾ ವೀಸಾ ರಹಿತ ಪ್ರವೇಶಕ್ಕೆ ಹಾಗೂ ತೊಂಬತ್ತು ದಿನಗಳ ವಸತಿಗೆ ಅನುಮತಿ ನೀಡಿದೆ.

೫. ನೇಪಾಳ. ಭಾರತದ ನೆರೆಯ ಹಾಗೂ ಹಿಂದೂ ರಾಷ್ಟ್ರ ಕೂಡಾ ಆಗಿರುವ ನೇಪಾಳಕ್ಕೆ ಹೋಗಲು ಕೂಡಾ ವೀಸಾದ ಅಗತ್ಯವಿಲ್ಲ. ಭಾರತೀಯರು ನೇಪಾಳದಲ್ಲಿ ಯಾವುದೇ ಕಾನೂನಿನ ತೊಡಕಿಲ್ಲದೆ ಓಡಾಡಬಹುದು. ಅವರಿಗೆ ಕೂಡಾ ಭಾರತದಲ್ಲಿ ಸಂಚರಿಸುವ ಅಧಿಕಾರವನ್ನು ಭಾರತ ನೀಡಿದೆ. ಪಶುಪತಿ ನಾಥ ಆಲಯ, ದರ್ಬಾರ್ ಚೌಕ, ರಾಯಲ್ ಪ್ಯಾಲೇಸ್, ಅಲ್ಲದೆ ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಕೂಡಾ ನೇಪಾಳದಲ್ಲಿರುವ ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಇದೆ.

೬. ಸಿಚೆಲ್ಸ್. ಇದೊಂದು ದ್ವೀಪ ಸಮೂಹಗಳ ರಾಷ್ಟ್ರ. ಪೂರ್ವ ಆಫ್ರಿಕಾದಲ್ಲಿರುವ ಈ ದೇಶಕ್ಕೆ ಸೇರಿರುವ ಒಟ್ಟು 115 ದ್ವೀಪಗಳಿವೆ. ಹವಳ ದ್ವೀಪಗಳು ಕೂಡಾ ಇಲ್ಲಿವೆ. ಇಲ್ಲಿನ ಪ್ರಾಣಿ ಸಂಪತ್ತು ಬಹಳ ಶ್ರೀಮಂತವಾಗಿದ್ದು, ವಿಶ್ವದ ಬಹಳ ಅಪರೂಪದ ಜಲಚರಗಳು ಇಲ್ಲಿ ಕಂಡುಬರುತ್ತದೆ. ಇಲ್ಲಿಗೆ ಹೋಗಲು ಭಾರತೀಯರಿಗೆ ವೀಸಾದ ಅವಶ್ಯಕತೆ ಇಲ್ಲ. ಅಲ್ಲಿಗೆ ತಲುಪಿದ ಮೇಲೆ ಮೂವತ್ತು ದಿನಗಳ ವೀಸಾ ಪಡೆಯುವ ಅವಕಾಶವನ್ನು ನೀಡಲಾಗಿದೆ.

೭. ಫಿಜಿ. ದಕ್ಷಿಣ ಫೆಸಿಫಿಕ್ ಸಾಗರದಲ್ಲಿರು ದ್ವೀಪ ಸಮೂಹ ಇದಾಗಿದ್ದು, ಇಲ್ಲಿ ಸುಮಾರು 300 ಸುಂದರವಾದ ದ್ವೀಪಗಳು ಇದ್ದು, ಇಲ್ಲಿಗೆ ಹೋಗಲು ಭಾರತೀಯರು ಮೊದಲೇ ವೀಸಾ ಪಡೆಯುವ ಅಗತ್ಯವಿಲ್ಲ. ಅಲ್ಲಿಗೆ ತಲುಪಿದ ಮೇಲೆ ಪಡೆಯುವ ಅವಕಾಶವಿದೆ. ಈ ದ್ವೀಪಗಳು ಬಹಳ ಸ್ವಚ್ಛವಾದ , ಪಾರದರ್ಶಕವಾದ ಸುಂದರ ಸರೋವರಗಳನ್ನು ಹೊಂದಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here