ಅನಾರೋಗ್ಯದ ನಿಮಿತ್ತ ನಗರದ ವೆಗಾಸ್ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಭೇಟಿ ಮಾಡಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಸಿಎಂ ಬಿಎಸ್‍ವೈ ಆಗಮಿಸುತ್ತಿರುವುದನ್ನು ಕಂಡ ಕೂಡಲೇ ಅಚ್ಚರಿಗೊಂಡ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿಗಳು ಬಂದಿದ್ದಾರೆ. ಅವರಿಗೆ ಕುಳಿತುಕೊಳ್ಳಲು ಚೇರ್ ನೀಡಿ ಎಂದು ಹೇಳಿದರು.

 

ಸಿದ್ದರಾಮಯ್ಯ ಅವರ ಆರೋಗ್ಯದ ಕುರಿತು ಮಾಹಿತಿ ಪಡೆದ ಸಿಎಂ, ಸಂಪೂರ್ಣ ಚೇತರಿಕೆ ಆಗುವವರೆಗೂ ಆಸ್ಪತ್ರೆಯಲ್ಲೇ ಇದ್ದು, ಸಂಪೂರ್ಣವಾಗಿ ವಿಶ್ರಾಂತಿ ಪಡೆಯಿರಿ ಎಂದರು.ಸಿಎಂ ಸಲಹೆ ಪಡೆದ ಸಿದ್ದರಾಮಯ್ಯ ಅವರು ಡಾಕ್ಟರ್ ಇಲ್ಲೇ ಇದ್ದಾರೆ, ಸಂಪೂರ್ಣ ವಿಶ್ರಾಂತಿ ಪಡೆದಿಯುತ್ತೇನೆ ಎಂದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಈಶ್ವರಪ್ಪ ಅವರು, ನಿಮಗೂ ಹಾರ್ಟ್ ಇದೆ ಎಂದು ಗ್ಯಾರಂಟಿ ಆಯ್ತು ಎಂದರು. ಈ ಮಾತಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ನನಗೆ ಹೃದಯ ಇಲ್ಲ ಎಂದುಕೊಂಡಿದ್ದೀರಾ ಎಂದು ಪ್ರಶ್ನಿಸಿದರು.

ಹೃದಯ ಇಲ್ಲ ಎಂದು ನಾನು ಯಾವಾಗಲಾದರೂ ಬಾಯಿ ಬಿಟ್ಟು ಹೇಳಿದ್ದೇನಾ? ಎಂದು ನಗೆಚಟಾಕಿ ಹಾರಿಸಿದರು. ಈಶ್ವರಪ್ಪ ಮಾತಿನಿಂದ ನಗೆ ಬೀರಿದ ಸಿದ್ದರಾಮಯ್ಯ ಅವರು, ಹ್ಯೂಮನ್ ಆನಾಟಮಿ ಏನ್ ಓದ್ಕೋಂಡಿದ್ದೀಯಾಪ್ಪ….! ಎಂದರು.ಸಿದ್ದರಾಮಯ್ಯ ಭೇಟಿ ಬಳಿಕ ಮಾತನಾಡಿದ ಬಿಎಸ್‍ವೈ, ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ಚೇತರಿಕೆಯಾಗಿದೆ. ಅವರು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಮನೆಗೆ ತೆರಳಿದರೆ ಹೆಚ್ಚಿನ ಕಾರ್ಯಕರ್ತರು ಅಗಮಿಸುವ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿಯೇ ಹೆಚ್ಚಿನ ವಿಶ್ರಾಂತಿ ಪಡೆಯುತ್ತಿದ್ದಾರೆ. ನಮ್ಮ ಭೇಟಿಯಿಂದ ಸಿದ್ದರಾಮಯ್ಯ ಅವರು ಸಂತಸ ವ್ಯಕ್ತಪಡಿಸಿದರು ಎಂದು ತಿಳಿಸಿದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here