Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಜೀವನ್ಮರಣ ಸ್ಥಿತಿಯಲ್ಲಿದ್ದಾರೆ ಖ್ಯಾತ ನಟಿ ! ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿದ ಗೆಳತಿ

ತಮಿಳು, ಮಲಯಾಳಂನ ಜನಪ್ರಿಯ ನಟಿ ಅರುಂಧತಿ ನಾಯರ್ ರಸ್ತೆ ಅಪಘಾತಕ್ಕೀಡಾಗಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ. ಕೇರಳದ ತಿರುವನಂತಪುರಂನಲ್ಲಿರುವ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ವೈದ್ಯರು ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.
ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ ನಂತರ ಅವರು ಮತ್ತು ಅವರ ಸಹೋದರ ಸ್ಕೂಟಿಯಲ್ಲಿ ಮನೆಗೆ ಹೋಗುತ್ತಿದ್ದಾಗ ಕೋವಲಂ ಬಳಿ ವೇಗವಾಗಿ ಬಂದ ಕಾರು ಅವರ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.ಅರುಂಧತಿ ಅವರು ಪ್ರಸ್ತುತ ತಿರುವನಂತಪುರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಧಾರಾವಾಹಿ ನಟಿ ಗೋಪಿಕಾ ಅನಿಲ್, ಅರುಂಧತಿ ಅವರ ವೈದ್ಯಕೀಯ ಚಿಕಿತ್ಸೆಗೆ ನೆರವಾಗುವಂತೆ ಜನರಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಮನವಿಯಲ್ಲಿ ಏನಿದೆ?

ನಟಿ ಅರುಂಧತಿ ಆಸ್ಪತ್ರೆ ಸೇರಿರುವ ಬಗ್ಗೆ ಆಕೆಯ ಗೆಳತಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ಮನವಿಯೊಂದನ್ನೂ ಮಾಡಿಕೊಂಡಿದ್ದಾರೆ. ‘ನನ್ನ ಸ್ನೇಹಿತೆ ಅರುಂಧತಿ ನಿನ್ನೆ ಅಪಘಾತಕ್ಕೀಡಾದಳು. ಆಕೆಯ ಸ್ಥಿತಿ ಗಂಭೀರವಾಗಿದೆ. ಸದ್ಯ ಆಕೆ ವೆಂಟಿಲೇಟರ್‌ನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಆಕೆಯ ಕುಟುಂಬಕ್ಕೆ ದಿನನಿತ್ಯದ ಆಸ್ಪತ್ರೆ ವೆಚ್ಚ ಭರಿಸಲು ಸಾಧ್ಯವಾಗುತ್ತಿರಲಿಲ್ಲ. ನಾವು ನಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದೇವೆ. ಆದರೆ ಇದೀಗ ಆಕೆಯ ಚಿಕಿತ್ಸೆಗೆ ಇದು ಸಾಕಾಗುವುದಿಲ್ಲ. ಆಕೆಯ ಕುಟುಂಬಕ್ಕೆ ತುಂಬಾ ಸಹಕಾರಿಯಾಗಲು ನೀವೂ ಸಹಾಯ ಮಾಡಿದರೆ, ಆಕೆಗೆ ಉತ್ತಮ ಚಿಕಿತ್ಸೆ ನೀಡಲು ಸಹಾಯವಾಗುತ್ತದೆ’ ಎಂದು ಇನ್‌ಸ್ಟಾ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದು, ಜೊತೆಗೆ ಬ್ಯಾಂಕ್ ಮತ್ತು ಫೋನ್ ಸಂಖ್ಯೆ ವಿವರಗಳನ್ನು ಹಂಚಿಕೊಂಡಿದ್ದಾರೆ ಗೋಪಿಕಾ ಅನಿಲ್.

ಹಲವು ಚಿತ್ರಗಳಲ್ಲಿ ನಟಿಸಿದ್ದ ನಟಿ :

ಅರುಂಧತಿ ನಾಯರ್ ತಮಿಳು ಚಲನಚಿತ್ರ ಪೊಂಗಿ ಎಲು ಮನೋಹರ (2014) ಮೂಲಕ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆ ನಂತರ ವಿರುಮಾಂಡಿಕುಂ ಶಿವನಂದಿಕಂ, ಸೈತಾನ್, ಪಿಸ್ತಾ ಮತ್ತು ಐರಾಮ್ ಪೊರ್ಕಾಸುಕಲ್ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದರು.
2018 ರಲ್ಲಿ ಮಲಯಾಳಂನಲ್ಲಿ ಬಿಡುಗಡೆಯಾದ ‘ಒಟ್ಟಕೋರು ಕಾಮುಕನ್’ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ವಿಜಯ್ ಆಂಟೋನಿ ಜೊತೆ ಸೈತಾನ್ ಚಿತ್ರದ ಮೂಲಕ ಉತ್ತಮ ಜನಪ್ರಿಯತೆಯನ್ನು ಗಳಿಸಿದರು.

ಕಳೆದ ವರ್ಷ ಬಿಡುಗಡೆಯಾದ ಐರಾಮ್ ಪೊರ್ಕಾಸುಕಲ್ ಎಂಬ ಚಿತ್ರದಲ್ಲಿಯೂ ನಟಿಸಿದ್ದರು.

ಖಚಿತ ಪಡಿಸಿದ ಸಹೋದರಿ :

ಅರುಂಧತಿ ಸಹೋದರಿ ಆರತಿ ನಾಯರ್ ಕೂಡ ಚಿತ್ರರಂಗದಲ್ಲಿದ್ದಾರೆ. ಅವರೂ ಕೂಡ ಅಪಘಾತದ ಬಗ್ಗೆ ಖಚಿತಪಡಿಸಿದ್ದು, ಸಹೋದರಿಗೆ ಅಪಘಾತವಾಗಿದ್ದು ನಿಜ. ಮೂರು ದಿನಗಳ ಹಿಂದೆ ಅಪಘಾತವಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಅವರು ತ್ರಿವೆಂಡ್ರಮ್ ನ ಅನಂತಪುರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಲ್ಲಿಡಲಾಗಿದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಅರುಂಧತಿ ಸಾವು ಬದುಕಿನ ಹೋರಾಟವನ್ನ ನಡೆಸುತ್ತಿದ್ದಾರೆ. ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದಾರೆ.