ಇಂಗ್ಲೆಂಡ್ ನಲ್ಲಿ ಅಮೆರಿಕನ್ ಎಕ್ಸ್.ಎಲ್. ಬುಲ್ಲಿ ಡಾಗ್ ನಿಷೇಧ – ಈ ಶ್ವಾನ ಎಷ್ಟು ಅಪಾಯಕಾರಿ ಗೊತ್ತ? ರಿಷಿ ಸುನಾಕ್ ನಿಷೇಧಿಸುವ ಮಾತು ಆಡಿದ್ಯಾಕೆ?

ನಾಯಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರಿಗೂ ಈ ನಿಯತ್ತಿನ ಪ್ರಾಣಿ ಎಂದರೆ ಅಚ್ಚುಮೆಚ್ಚು. ಆದರೆ ಇಂಗ್ಲೆಂಡ್ ನಲ್ಲಿ ನಾಯಿಯ ತಳಿಯೊಂದನ್ನು ನಿಷೇಧಿಸಲು ಚಿಂತನೆ ನಡೆದಿದೆ. ಆ ತಳಿಯ ಹೆಸರು ಕೇಳುತ್ತಿದ್ದಂತೆ ಜನರು ಬೆಚ್ಚಿ ಬೀಳುತ್ತಾರೆ. ಹೀಗಾಗಿ ವರ್ಷಾಂತ್ಯದಲ್ಲಿ ಸರಕಾರ ಇದನ್ನು ನಿಷೇಧಿಸಲಿದೆ. ಅದ್ಯಾವ ತಳಿ? ಯಾಕೆ ಬ್ಯಾನ್ ಮಾಡಲಾಗುತ್ತದೆ? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಅಮೆರಿಕನ್ ಎಕ್ಸ್.ಎಲ್. ಬುಲ್ಲಿ ಡಾಗ್

ಈ ತಳಿಯನ್ನು ದೇಶದಲ್ಲಿ ನಿಷೇಧಿಸಲಾಗುವುದು ಎಂದು ಇಂಗ್ಲೆಂಡ್ ಪ್ರಧಾನ ಮಂತ್ರಿ ರಿಷಿ ಸುನಕ್ ಹೇಳಿದ್ದಾರೆ. ಕೋಪಕ್ಕೆ ಹೆಸರಾದ ಅಮೆರಿಕನ್ ಎಕ್ಸ್.ಎಲ್. ಬುಲ್ಲಿ ತಳಿ ತುಂಬಾ ಅಪಾಯಕಾರಿ ಎಂದು ಗುರುತಿಸಲಾಗಿದೆ.

ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಸುಮಾರು 10 ನಾಯಿಗಳ ಆಕ್ರಮಣಗಳ ಪೈಕಿ 6 ಪ್ರಕರಣ ಈ ಅಮೆರಿಕನ್ ಬುಲ್ಲಿ ಡಾಗ್ಸ್ ಗಳದ್ದು ಎಂದರೆ ಅದೆಷ್ಟು ಅಪಾಯಕಾರಿ ಎಂದು ನೀವೇ ಲೆಕ್ಕ ಹಾಕಿ. ಇದರಿಂದ ಅಪಾರ ಪ್ರಮಾಣದಲ್ಲಿ ಸಾವು ನೋವು ಸಂಭವಿಸುತ್ತಿರುವುದರಿಂದ ನಿಷೇಧಿಸಬೇಕೆಂಬ ಕೂಗು ಕೇಳಿ ಬಂದಿದ್ದರಿಂದ ಸರಕಾರ ಕ್ರಮಕ್ಕೆ ಮುಂದಾಗಿದೆ.

ಈ ತಳಿಯ ನಾಯಿಯನ್ನು ನಿಷೇಧಿಸಲಾಗುವುದು ಎಂದು ಸ್ವತಃ ಪ್ರಧಾನ ಮಂತ್ರಿಯೇ ಹೇಳಿಕೆ ನೀಡಿದ್ದು ಪ್ರಕರಣದ ಗಂಭೀರತೆಯನ್ನು ಸೂಚಿಸುತ್ತದೆ.

ಹೊಸ ತಳಿ

ಅಮೆರಿಕನ್ ಬುಲ್ಲಿ ಹೊಸ ತಳಿಯಾಗಿದ್ದು ಇದನ್ನು 1990ರಲ್ಲಿ ಅಭಿವೃದ್ದಿ ಪಡಿಸಲಾಯಿತು. ವಿವಿಧ ಬ್ರೀಡ್ ಗಳ ಮಿಶ್ರಣದಿಂದ ಈ ತಳಿಯನ್ನು ಅಮೇರಿಕದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಗಟ್ಟಿಮುಟ್ಟಾದ ದೇಹ ಹೊಂದಿರುವುದು ಇದರ ವಿಶೇಷತೆ. ಅಲ್ಲದೆ ಶಕ್ತಿಶಾಲಿ ಮೂಳೆಗಳಿರುವ ಇದು ಬರೋಬ್ಬರಿ 57 ಕೆ.ಜಿ. ತೂಕ ಮತ್ತು 53 ಸೆಂಟಿ ಮೀಟರ್ ಉದ್ದ ಬೆಳೆಯಬಲ್ಲದು.

2014ರಲ್ಲಿ ಇಂಗ್ಲೆಂಡ್ ಗೆ ಕಾಲಿಟ್ಟ ಈ ತಳಿ ಅಲ್ಲಿ ಬೇಗನೇ ಜನಪ್ರಿಯವಾಯಿತು. ದುಬಾರಿಯಾಗಿರುವ ಇವು ಇಂಗ್ಲೆಂಡ್ ನಲ್ಲಿ ಸುಮಾರು ಸಾವಿರದ ಮೇಲೆ ಇವೆ ಎಂದು ಅಂದಾಜಿಸಲಾಗಿದೆ. ಈ ತಳಿಯ ನಾಯಿಗಳು ತುಂಬಾ ಕೋಪಗೊಳ್ಳುವುದು ಅಪಾಯಕ್ಕೆ ಕಾರಣ. ಇದರ ದಾಳಿಯಿಂದ ಬಾಲಕಿ, ವ್ಯಕ್ತಿ ಸೇರಿದಂತೆ ಕೆಲವರು ಮೃತಪಟ್ಟಿರುವುದು ನಿಷೇಧದ ಕೂಗು ಕೇಳಿ ಬರಲು ಕಾರಣ.

ಇಂಗ್ಲೆಂಡ್ ನಲ್ಲಿ ಇದುವರೆಗೆ ಪಿಟ್ ಬುಲ್ ಟೆರಿಯರ್, ಜಪಾನಿಸ್, ತೋಸಾ, ಡೋಗೋ ಅರ್ಜೆಂಟಿನೋ ಮತ್ತು ಫಿಲಾ ಬ್ರೆಜ್ಹಿಲಿಯಾರೋ ನಾಯಿ ತಳಿಗಳನ್ನು ನಿಷೇಧಿಸಲಾಗಿದೆ. ನಿಷೇಧಿಸಲ್ಪಡುವ ನಾಯಿಗಳನ್ನು ವಶಕ್ಕೆ ಪಡೆದು ಸಾಯಿಸುವ ಅಧಿಕಾರ ಸಂಬಂಧಪಟ್ಟ ಇಲಾಖೆಗೆ ಇರುತ್ತದೆ. ಬ್ಯಾನ್ ನಂತರ ಆ ತಳಿಯ ನಾಯಿಯನ್ನು ಮಾರುವಂತಿಲ್ಲ, ಸಂತಾನ ವೃದ್ದಿ ಮಾಡುವಂತಿಲ್ಲ.

Comments (0)
Add Comment